ಚಿಕ್ಕೋಡಿ: ಮುಂಬರುವ ದಶಕವು ಕೃತಕಬುದ್ದಿಮತ್ತೆಯಿಂದ ಕೂಡಿರಲಿದ್ದು, ಪ್ರಮುಖ ಔದ್ಯೋಗಿಕ ಕ್ಷೇತ್ರವಾಗಿರಲಿದೆ. ದೇಶದಲ್ಲಿ ಔದ್ಯೋಗಿಕ ಅಭಿವೃದ್ದಿಗೆ ಕೃತ್ಕಬುದ್ದಿಮತ್ತೆಯ ಕೊಡುಗೆ ಅಪಾರವಾಗಲಿದೆ. ಆರೋಗ್ಯ ಕ್ಷೇತ್ರದಲ್ಲಿ ರೊಬೊಟಿಕ್ ಸಹಕಾರ ಅತ್ಯಧಿಕವಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪದ್ಮಭೂಷಣ ಜೈಶಂಕರ ಅವರಿಂದಿಲ್ಲಿ ಹೇಳಿದರು.
ಚಿಕ್ಕೋಡಿಯಲ್ಲಿ ಕೆಎಲ್ ಇ ಸಂಸ್ಥೆಯು ನೂತನವಾಗಿ ನಿರ್ಮಿಸಿರುವ ಕೆಎಲ್ಇ ಸ್ಕೂಲ್ಅನ್ನು ಬುಧವಾರ ದಿ. 28 ಫೆಬ್ರುವರಿ, 2024 ರಂದು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯುತ್ ಆಧಾರಿತ ವಾಹನಗಳ ಯುಗ ತೀವ್ರಗೊಳ್ಳಲಿದೆ. ಆರೋಗ್ಯ ಕಾಪಾಡಲು ಆಯುಷ್ಯ ಮಾನ ಭಾರತ ಯೋಜನೆ ಜಾರಿಗೆ ತರಲಾಗಿದೆ ಎಂದ ಅವರು, ಈ ಮೊದಲು ವಿದೇಶಾಂಗ ನೀತಿಯು ಸರಳವಾಗಿರಲಿಲ್ಲ. ಅದಕ್ಕೆ ಅಮೂಲಾಗ್ರ ಬದಲಾವಣೆ ತರಲಾಗಿದೆ. ದೇಶದಲ್ಲಿ ಪಾಸ್‌ಪೋರ್ಟ್ ಪಡೆಯಲು ಈ ಮೊದಲು ಕೇವಲ 77 ಸೇವಾ ಕೇಂದ್ರಗಳಿದ್ದವು. ಅವುಗಳನ್ನು ಈಗ 527. ಕ್ಕೇರಿಸಲಾಗಿದೆ. ಭ್ರಷ್ಟಾಚಾರ ಮುಕ್ತ ಪಾರದರ್ಶಕತೆ ಯನ್ನು ಅಳವಡಿಸಿಕೊಂಡು ಕಡಿಮೆ ಅವಧಿಯಲ್ಲಿ ಪಾಸ್‌ಪೋರ್ಟ್ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅನ್ನ, ಉಜ್ವಲಾ, ಆವಾಸ ಯೋಜನೆಗಳಂತಹ ಅಸಂಖ್ಯ ಜನಸಾಮಾನ್ಯರನ್ನೇ ಕೇಂದ್ರವಾಗಿಟ್ಟುಕೊಂಡು ಜಾರಿಗೆ ತಂದ ಯೋಜನೆಗಳು ಭಾರತವನ್ನು ಅಭಿವೃದ್ಧಿಯತ್ತ ಮುಂದಡಿ ಇಟ್ಟಿದೆ. ಡಿಜಟಲೀಕರಣದಿಂದ ಕ್ಯಾಶ್‌ಲೆಸ್ ದೇಶವಾಗಿ ಜಗತ್ತಿನ ಬಹುದೇಶಗಳನ್ನು ವಿಸ್ಮಯಗೊಳಿಸಿದೆ. ಕೋವಿಡ್ ಸಂದರ್ಭದಲ್ಲಿ ನಮ್ಮಲ್ಲಿ ಉತ್ತಮವಾದ ಆಸ್ಪತ್ರೆಗಳು ಇರಲಿಲ್ಲ. ಸೌಲಭ್ಯಗಳು ಇರಲಿಲ್ಲ. ಜಾಗತಿಕವಾಗಿ ಕೋವಿಡ್‌ನ್ನು ಎದುರಿಸುವುದು ದುಸ್ತರವೆಂಬುದು ಅನೇಕ ದೇಶಗಳ ಅಂಬೋಣವಾಗಿತ್ತು. ಆದರೆ ಕೇವಲ ಒಂದು ವರ್ಷದ ಅವಧಿಯಲ್ಲಿ ಎಲ್ಲರ ಊಹೆಗಳನ್ನು ಬದಲಾಯಿಸಿತು. ನೂರಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ಲಸಿಕೆಯನ್ನು ನೀಡಿದ ಹೆಮ್ಮೆ ನಮ್ಮದು. ಇದೆಲ್ಲವೂ ಸಾಧ್ಯವಾಗಿದ್ದು ಮೋದಿಜಿಯವರ ದೂರದೃಷ್ಟಿ ಹಾಗೂ ನಾಯಕತ್ವದ ಗುಣದಿಂದ. ಭಾರತವನ್ನು ವಿದೇಶದವರು ನೋಡುವ ದೃಷ್ಟಿಕೋನ ಬದಲಾಗಿದೆ ಎಂದರು.
ದೇಶವು ಅಮೃತ ಕಾಲದಲ್ಲಿದ್ದು ಕಳೆದ ಒಂದು ದಶಕದಲ್ಲಿ ಅಭಿವೃದ್ಧಿಯ ಸುವರ್ಣ ಕಾಲದಲ್ಲಿದ್ದೇವೆ. ದೇಶದಲ್ಲಿ ಶಿಕ್ಷಣದಲ್ಲಿ ಕ್ರಾಂತಿಯಾಗಿದೆ. ಎರಡು ದಿನಕ್ಕೆ ಒಂದು ಮಹಾವಿದ್ಯಾಲಯ, ವಾರಕ್ಕೊಂದು ವಿಶ್ವವಿದ್ಯಾಲಯ ನಿರ್ಮಾಣವಾಗಿವೆ. ಆರ್ಥಿಕತೆಯಲ್ಲಿ ವಿಶ್ವದ ನಾಲ್ಕನೇ ಕ್ರಮಾಂಕದಲ್ಲಿದ್ದೇವೆ. ಶೀಘ್ರದಲ್ಲಿಯೇ ಮೂರನೇ ಕ್ರಮಾಂಕದಲ್ಲಿ ಬರಲಿದ್ದೇವೆ. ವಿಶ್ವದ ನಂ. 1 ಪಟ್ಟಕ್ಕೇರಲು ಉದ್ಯಮಗಳು ಅತ್ಯವಶ್ಯಕ. ಅದಕ್ಕನುಗುಣವಾಗಿ ನೀತಿ ರೂಪಿಸಲಾಗುತ್ತಿದೆ. ಪ್ರತಿದಿನ 30 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗುತ್ತಿದೆ. ದೇಶವು ಅಭಿವೃದ್ಧಿ ಪಥದಲ್ಲಿ ಸಾಗಲು ಕೌಶಲ್ಯಭರಿತ ಮಾನವ ಸಂಪನ್ಮೂಲ ಅತ್ಯವಶ್ಯಕ. ಅದರಂತೆ ಯುವಕರನ್ನು ಹೆಚ್ಚಾಗಿ ಹೊಂದಿರುವ ಭಾರತವು ಉದ್ಯಮಾಧಾರಿತ ಸಂಸ್ಥೆಗಳು ಹೆಚ್ಚೆಚ್ಚು ಸ್ಥಾಪನೆಯಾಗಬೇಕು ಎಂಬ ಉದ್ದೇಶದಿಂದ ಅಮೂಲಾಗ್ರ ಬದಲಾವಣೆ ತಂದು ಯುರೋಪ ದೇಶದ ಜನಸಂಖ್ಯೆಯಷ್ಟು ಭಾರತೀಯ ಜನರಿಗೆ ಮುದ್ರಾ ಸಾಲ ನೀಡಿ ಅವರನ್ನು ಉದ್ಯಮಿಗಳನ್ನಾಗಿ ಮಾಡಲಾಗಿದೆ. ಅದಕ್ಕೆ ಪೂರಕವಾದ ತರಬೇತಿ ನೀಡಲು ಸ್ಕಿಲ್ ಇಂಡಿಯಾ, ಸ್ಟಾರ್ಟಾಪ್ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಹಳೆಯ ನೆನಪು ಮೆಲಕು: ಚಿಕ್ಕೋಡಿ ಪಟ್ಟಣದ ಹಳೆಯ ಉಪವಿಗಾಧಿಕಾರಿ ಕಚೇರಿಗೆ ಭೇಟಿ ನೀಡಿದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ ಅವರು ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕಿದರು. 1977-78ರಲ್ಲಿ ಪ್ರೊಬೆಶನರಿ ಎಸಿಯಾಗಿ ಚಿಕ್ಕೋಡಿಗೆ ಆಗಮಿಸಿದ್ದಾಗ ಇದೇ ಕಚೇರಿಯ ಕುರ್ಚಿಯಲ್ಲಿ ಕುಳಿತ ದಿನಗಳನ್ನು ನೆನೆದರು. ಕೆಲವು ಸಿಬ್ಬಂದಿ ನನಗೆ ಕನ್ನಡ ಕಲಿಸುತ್ತಿದ್ದರು. ನಾನು ಇಲ್ಲಿಗೆ ಬರುವ ಕೆಲ ತಿಂಗಳುಗಳ ಮುಂಚೆ ನನಗೆ ಮದುವೆಯಾಗಿತ್ತು. ನನ್ನ ಪತ್ನಿಯನ್ನೂ ಇಲ್ಲಿಗೆ ಕರೆದುಕೊಂಡು ಬಂದಿದ್ದೆ ಎಂದು ತಿಳಿಸಿದರು.
ಇದೇ ವೇಳೆ ಪುರಸಭೆ ಪೌರಕಾರ್ಮಿಕರೊಂದಿಗೆ ಚರ್ಚಿಸಿ, ನಾನು 7 ತಿಂಗಳುಗಳ ಕಾಲ ಇಲ್ಲಿಯೇ ಕೆಲಸ ಮಾಡಿದ್ದೆ. ಆಗ ನನಗೆ ಕೇವಲ 23 ವರ್ಷ. ಚಿಕ್ಕೋಡಿ ಸಾಕಷ್ಟು ಬದಲಾವಣೆ ಕಂಡಿದೆ. 45 ವರ್ಷಗಳ ನಂತರ ಮತ್ತೆ ಇಲ್ಲಿಗೆ ಆಗಮಿಸಿದ್ದೇನೆ. ಮೋದಿಯವರ ಆಡಳಿತದಲ್ಲಿ ದೇಶದಲ್ಲಿ ಸಾಕಷ್ಟು ಅಭಿವೃದ್ದಿಯಾಗಿದ್ದುಚಿಕ್ಕೋಡಿಯಲ್ಲಿಯೂ ಅದು ಕಾಣಿಸುತ್ತಿದೆ ಎಂದರು.