ಬೆಳಗಾವಿ: ಪತ್ನಿ ಹಿಂದೆ ಬಿದ್ದ ಪೊಲೀಸ ಪೇದೆ ವಿರುದ್ಧ ಅವಳ ಪತಿ ಪೊಲೀಸ್ ಕಮೀಷನರಗೆ ದೂರು ನೀಡಿ, ಆತನ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಘಟನೆ ಬೆಳಗಾವಿ ಕಮೀಷನರೇಟ್ ವ್ಯಾಪ್ತಿಯಲ್ಲಿ ನಡೆದಿದೆ.
ವಿವಾಹಿತ ಮಹಿಳೆಯೊಂದಿಗೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಪೇದೆಯೋರ್ವ (ಕಾನ್ಸಟೇಬಲ್ ) ಅಸಭ್ಯವಾಗಿ ನಡೆದುಕೊಂಡಿದ್ದು, ಆತನ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಮಹಿಳೆ ಪತಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ದೂರನ್ನಾಧರಿಸಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬೆಳಗಾವಿ ಗ್ರಾಮೀಣ ಎಸಿಪಿಗೆ ಆಯುಕ್ತರು ಸೂಚಿಸಿದ್ದಾರೆ.
ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಪೇದೆ ಮಡ್ಡೆಪ್ಪ ಮಂಟೂರ ಎಂಬಾತ ಈ ಹಿಂದೆ ಹಲಗಾ ಗ್ರಾಮದ ಬೀಟ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಅಲ್ಲಿಯೇ ಇದ್ದ ದಾಬಾ ಮಾಲೀಕರೊಂದಿಗೆ ಪರಿಚಯವಾಗಿ, ಅಲ್ಲಿಯೇ ಊಟ, ವಿಶ್ರಾಂತಿ ಪಡೆಯಲು ಆರಂಭಿಸಿದ್ದಾರೆ. ಬಳಿಕ ಈ ಪೊಲೀಸಪ್ಪ ದಾಬಾ ಮಾಲೀಕನ ಪತ್ನಿಯೊಂದಿಗೆ ಸ್ನೇಹ ಬೆಳೆಸಿ ಅನುಚಿತವಾಗಿ ವರ್ತನೆ ನಡೆಸಿದ್ದಾರೆ. ಈ ವಿಚಾರವಾಗಿ ನೊಂದ ವ್ಯಕ್ತಿ ಠಾಣೆಗೆ ತೆರಳಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ವೇಳೆ ಅಧಿಕಾರಿಗಳು ಆತನನ್ನು ತೀವ್ರ ತರಾಟೆಗೆ ತೆಗೆದುಕೊಂಡು ಬುದ್ದಿಮಾತು ಹೇಳಿದ್ದರೂ ಕೂಡ ತನ್ನ ಹಳೆಯ ಚಾಳಿಯ ದುರ್ಬುದ್ದಿಯನ್ನು ಮುಂದುವರಿಸಿದ್ದರಿಂದ ಮಹಿಳೆಯ ಪತಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾನೆ.