ಬೆಳಗಾವಿ, ಜ. 01; ಕರ್ನಾಟಕ ಮತ್ತು ಗೋವಾ ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನುಮುಂಬರುವ ಮೂರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಗಡವು ವಿಧಿಸಿದ್ದು, ಯಾವುದೇ ಕಾರಣಕ್ಕೆ ವಿಳಂಬ ನೀತಿಯನ್ನು ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. 5 ವರ್ಷಗಳು ಮುಗಿಯತ್ತ ಬಂದರೂ ಕೇವಲ 52 ಕಿ..ಮೀ ರಸ್ತೆ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಪ್ರಯಾಣಿಕರು ಮತ್ತು ವಾಹನ ಸವಾರರು ತೀವ್ರ ತೊಂದರೆಪಡುವಂತಾಗಿದೆ.
ಕೇಂದ್ರ ಭೂ ಸಾರಿಗೆ ಸಚಿವಾಲಯದ ಸೂಚನೆಯಂತೆ ಎನ್ಹೆಚ್ಎಐ ಯೋಜನಾ ನಿರ್ದೇಶಕ ಭುವನೇಶ್ವರ್ ಕುಮಾರ್ ಬೆಳಗಾವಿ-ಪಣಜಿ ವಯಾ ಅನ್ಮೋಡ್ ರಸ್ತೆಯ ಕಾಮಗಾರಿಯನ್ನು ಪರಿಶೀಲನೆ ನಡೆಸಿ,ಜಿಲ್ಲೆಯ ಖಾನಾಪುರದಿಂದ ಉತ್ತರ ಕನ್ನಡದ ಅನ್ಮೋಡ್ ಮೂಲಕ ಸಾಗುವ ಬೆಳಗಾವಿ-ಪಣಜಿ ರಸ್ತೆಯ ಕಾಮಗಾರಿಯನ್ನು ಮೂರು ತಿಂಗಳಿನಲ್ಲಿ ಪೂರ್ಣಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗಡುವು ನೀಡಿದೆ.
ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ವಿಠಲ ಹಲಗೇಕರ, ಹೊನಕಲ್ ಅನಮೋಡ ರಸ್ತೆಯ ಅಪೂರ್ಣ ಹಾಗೂ ತೀವ್ರವಾಗಿ ಹಾಳಾಗಿರುವ ಕುರಿತು ಕಳವಳ ವ್ಯಕತಪಡಿಸಿದ ಅವರು, ಗುಂಜಿ ಸುತ್ತ ಮುತ್ತಲಿನ 40ಕ್ಕೂ ಅಧಿಕ ಹಳ್ಳಿಗಳ ನಿವಾಸಿಗಳು ಅದರಲ್ಲಿ ಮುಖ್ಯವಾಗಿ ಶಾಲಾ ವಿದ್ಯಾರ್ಥಿಗಳು ಪ್ರತಿದಿನ ಪ್ರಯಾಸದ ಪ್ರವಾಸ ಮಾಡಬೇಕಾಗಿದೆ. ಅಲ್ಲದೇ ರಸ್ತೆ ಹಾಳಾದ ಕಾರಣ ಬಸಗಳು ಕೂಡ ಸಂಚರಿಸುತ್ತಿಲ್ಲ. ಅದಕ್ಕಾಗಿ ಶೀಘ್ರವೇ ರಸ್ತೆ ಕಾಮಗಾರಿ ಮುಗಿಸಿ ಅನುಕೂಲ ಕಲ್ಪಿಸುವಂತೆ ಒತ್ತಾಯಿಸಿದರು.
ಬೆಳಗಾವಿ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಪ್ರಮುಖ ಕೇಂದ್ರವಾಗಿದ್ದು, ಮೂರು ರಾಜ್ಯಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಕಾಮಗಾರಿ ವಿನ್ಯಾಸ ಸೇರಿದಂತೆ ವಿವಿಧ ಕಾರಣಗಳಿಗಾಗಿ ವಿಳಂಬವಾಗುತ್ತಿದೆ. ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಬೇಕು ಎಂದು ರಾಜ್ಯದ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಕೇಂದ್ರ ಸಚಿವ ನಿತಿನ ಗಡಕೆಇ ಅವರಿಗೆ ಮನವಿ ಮಾಡಿದ್ದರು.
ಈ ಹಿಂದೆ ಅಧಿಕಾರಿಗಳು ನೀಡಿದ್ದ ಮಾಹಿತಿ ಪ್ರಕಾರ ಈ ರಸ್ತೆ ಕಾಮಗಾರಿ 2024ರ ಮೇ ನಲ್ಲಿ ಪೂರ್ಣಗೊಳ್ಳಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿರುವದರಿಂದ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೇವಲ ಒಂದು ಬದಿಗೆ ಮಾತ್ರ ರಸ್ತೆ ನಿರ್ಮಾಣವಾಗಿದ್ದು, ಅದು ಅಲ್ಲಲ್ಲಿ ಅಪೂರ್ಣಗೊಂಡಿದೆ. ಇನ್ನೊಂದು ಬದಿಗೆ ರಸ್ತೆ ನಿರ್ಮಾಣ ಮಾಡುತ್ತಿದ್ದರೂ ಕೂಡ ಕಾಮಗಾರಿ ವೇಗ ಪಡೆಯುತ್ತಿಲ್ಲ.
2023ರ ಫೆಬ್ರವರಿಯಲ್ಲಿ ಸಚಿವ ನಿತಿನ್ ಗಡ್ಕರಿ ಬೆಳಗಾವಿ-ಪಣಜಿ ವಯಾ ಅನ್ಮೋಡ್ ರಸ್ತೆಯ ಕಾಮಗಾರಿಯ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದ್ದರು. ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದ್ದರು. ಆದರೆ ಕಾಮಗಾರಿ ಆಮೆಗತಿಯಲ್ಲಿಯೇ ಸಾಗುತ್ತಿದೆ. ಇದಕ್ಕೆ ಗೋವಾ ರಾಜ್ಯ ಸಹ ಆಕ್ಷೇಪವನ್ನು ವ್ಯಕ್ತಪಡಿಸಿದೆ.
ಖಾನಾಪುರ ತಾಲೂಕಿನಲ್ಲಿ ಬರುವ ಅರಣ್ಯ ಪ್ರದೇಶದ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಗುತ್ತಿಗೆ ಪಡೆದ ಕಂಪನಿ ಹೇಳಿತ್ತು. ಅರಣ್ಯ ಪ್ರದೇಶದಲ್ಲಿ ರಸ್ತೆ ವಿಸ್ತರಣೆ ಕುರಿತು ಪರಿಸರವಾದಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಈಗ ಕಾನೂನು ಸಮಸ್ಯೆಗಳು ನಿವಾರಣೆಯಾಗಿದ್ದು, ಕಾಮಗಾರಿ ಚುರುಕಾಗಬೇಕಿದೆ.
