ದಕ್ಷಿಣದ ಕಾಶಿ’ ಎಂದು ಕರೆಯಲ್ಪಡುವ ಕಪಿಲೇಶ್ವರ ದೇವಸ್ಥಾನ ಬೆಳಗಾವಿ ನಗರದ ಪ್ರಮುಖ ಮತ್ತು ಪುರಾತನ ದೇವಸ್ಥಾನಗಳಲ್ಲಿ ಒಂದು. ಹರ ಮತ್ತು ಹರಿ ಮೂರ್ತಿ ಪರಸ್ಪರ ಮುಖಾಮುಖಿಯಾಗಿ ಸ್ಥಾಪನೆಗೊಂಡಿರುವ ಭಾರತದ  ದೇವಸ್ಥಾನ ಎನ್ನುವ ಹೆಗ್ಗಳಿಕೆಯೂ ದೇವಸ್ಥಾನಕ್ಕಿದೆ.

ಕ್ರಿಶ 1500ರಲ್ಲಿ ಇಂದಿನ ದೇವಸ್ಥಾನ ಪ್ರದೇಶದಲ್ಲಿ ಕಪಿಲ ಮುನಿಗಳು ತಪಸ್ಸುಗೈದು ನಿತ್ಯ ಪೂಜೆ ಸಲ್ಲಿಸುತ್ತಿದ್ದರು. ಅವರ ಶಕ್ತಿಯಿಂದಲೇ ಶಿವನ ಮೂರ್ತಿ ಉದ್ಭವಗೊಂಡ ಕಾರಣದಿಂದ ಶಿವನ ದೇವಸ್ಥಾನಕ್ಕೆ ‘ಕಪಿಲೇಶ್ವರ’ ಎಂದು ಕರೆಯಲಾಗುತ್ತದೆ. ಉತ್ತರದ ಕಾಶಿನಾಥ ದೇವಸ್ಥಾನದಷ್ಟೇ ಮಹತ್ವ ಹೊಂದಿರುವುದರಿಂದ ‘ದಕ್ಷಿಣದ ಕಾಶಿ’ ಎಂದು ಕರೆಯಲಾಗುತ್ತದೆ. ಶಂಕರಾಚಾರ್ಯರು ತಮ್ಮ ಶಿಷ್ಯಗಣದೊಂದಿಗೆ ಇಲ್ಲಿ ಪೂಜೆ ವಿಧಿ ವಿಧಾನ ನೆರವೇರಿಸಿದ್ದರು. ನಂತರದ ದಿನಗಳಲ್ಲಿ ಸ್ವಾಮಿ ವಿವೇಕಾನಂದರು, ಮಹಾತ್ಮಾ ಗಾಂಧೀಜಿ ಕೂಡ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದುಕೊಂಡಿದ್ದಾರೆ.

*ದೇವಸ್ಥಾನದ ಒಳ- ಹೊರನೋಟ*:

ಪೂರ್ವಾಭಿಮುಖದ ದೇಗುಲ ಎರಡಂತಸ್ತಿನ ಛಾವಣಿ ಹೊಂದಿದೆ. ಗರ್ಭಗೃಹ, ಅಂತರಾಳ, ನವರಂಗ, ಸಭಾ ಮಂಟಪ ಮತ್ತು ಪ್ರದಕ್ಷಿಣ ಪಥಗಳನ್ನು ಹೊಂದಿದೆ. ಗರ್ಭಗೃಹದಲ್ಲಿ ಶಿವಲಿಂಗವಿದೆ. ದೇವಾಲಯದ ಎಡ ಪಾಶ್ರ್ವದಲ್ಲಿ ನವಗೃಹ ಮಂದಿರವಿದೆ. ಹೊರ ಆವರಣದಲ್ಲಿ ಶಿವ, ವೀರಭದ್ರ, ಕಾಳಭೈರವ ಮತ್ತು ಅನೇಕ ನಾಗಶಿಲ್ಪಗಳಿವೆ. 11ನೇ ಶತಮಾನಕ್ಕೆ ಸೇರಿದ ನಿಂತ ಭಂಗಿಯಲ್ಲಿರುವ ಚತುರ್ಭುಜಧಾರಿ ಕಾಳಭೈರವ ಮೂರ್ತಿ ತೆರೆದ ಗರ್ಭಗೃಹದಲ್ಲಿ ಪಶ್ಚಿಮಾಭಿಮುಖವಾಗಿ ನಿರ್ಮಾಣಗೊಂಡಿದೆ. 

ಪುರಾತನ ದೇವಾಲಯ 19ನೇ ಶತಮಾನದ ಆರಂಭದಲ್ಲಿ ಜೀರ್ಣೋದ್ಧಾರ ಕಂಡಿದೆ. ಆವರಣದ ವಿಷ್ಣು ಮಂದಿರ ಇತ್ತಿಚಿನ ವರ್ಷಗಳಲ್ಲಿ ಹೊಸ ರೂಪ ಪಡೆದಿದೆ. ದೇವಾಲಯ ಆವರಣದಲ್ಲಿ ದತ್ತ ಮಂದಿರ, ಸಾಯಿ ಮಂದಿರ, ಗಣೇಶ ಮಂದಿರ, ನಾಗ ದೇವತೆ ಮೂರ್ತಿಗಳು ನಿರ್ಮಾಣಗೊಂಡಿವೆ.

”ಭಾವುಕರ ಭೂಕೈಲಾಸ ಎನಿಸಿಕೊಂಡಿರುವ ಕಪಿಲೇಶ್ವರ ದೇವಸ್ಥಾನಕ್ಕೆ ಶಿವರಾತ್ರಿ ಮತ್ತು ಶ್ರಾವಣ ಮಾಸದಲ್ಲಿ ಭೇಟಿ ನೀಡುವ ಭಕ್ತರ ಸಂಖ್ಯೆ ಅಗಣಿತ. ರಾಜ್ಯ ಮಾತ್ರವಲ್ಲದೆ ಮಹಾರಾಷ್ಟ್ರ, ಗೋವಾ ರಾಜ್ಯದಲ್ಲೂ ಕಪಿಲೇಶ್ವರನ ಭಕ್ತರಿದ್ದಾರೆ. ಉತ್ತರ ಭಾರತದಿಂದಲೂ ಭಕ್ತರು ಕಪಿಲೇಶ್ವರ ದರ್ಶನಕ್ಕೆ ಬರುತ್ತಾರೆ. ಪ್ರತಿ 12ವರ್ಷಕ್ಕೋಮ್ಮೆ ಕಪಿಲೇಶ್ವರ ದೇವಸ್ಥಾನಕ್ಕೆ ನಾಗಾ ಸಾಧುಗಳು ಬಂದು ನಾಲ್ಕು ದಿನಗಳ ಕಾಲ ಪೂಜೆಗೈಯುತ್ತಾರೆ. ದೇಶದಲ್ಲಿನ 12 ಜ್ಯೋತಿರ್ಲಿಂಗ ಮತ್ತು ನಾಲ್ಕು ಚಾರ್‌ಧಾಮಗಳ ದರ್ಶನ ಮಾಡಿ ಗಂಗೆಯ ನೀರು ತಂದು ಕಪಿಲೇಶ್ವರ ದೇವಸ್ಥಾನದ ಜಲಕುಂಡದಲ್ಲಿ ಹಾಕಿ ಸ್ನಾನ ಮಾಡಿ ದರ್ಶನ ಪಡೆದಾಗ ಯಾತ್ರೆ ಪೂರ್ಣಗೊಂಡು ಜೀವನದಲ್ಲಿ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆ ಇದೆ ಎಂದು ದೇವಸ್ಥಾನದ ಮುಖ್ಯ ಅರ್ಚಕರು ತಿಳಿಸುತ್ತಾರೆ.