ಬೆಳಗಾವಿ :ಜಾತಿ ಗಣತಿ ವರದಿಯನ್ನು ಸರ್ಕಾರ ಮೊದಲು ಸ್ವೀಕರಿಸಲಿ. ವರದಿ ಬಿಡುಗಡೆ ಮೊದಲೇ ವಿರೋಧ ಮಾಡುವುದು ಸರಿಯಲ್ಲ. ಅದರ ಕುರಿತು ವಿಧಾನಸಭೆ, ಪರಿಷತ್‌ನಲ್ಲಿ ವಿಸ್ತೃತವಾಗಿ ಚರ್ಚೆ ಆಗಬೇಕು. ಆಮೇಲೆ ಒಪ್ಪುವುದು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರಎಂದು ಜಾಗತಿಕ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಜಾಮದಾರ ಹೇಳಿದರು.
ಬೆಳಗಾವಿಯಲ್ಲಿಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಲಿಂಗಾಯತರು ಹಿಂದೂಗಳಲ್ಲ ಎಂಬ ನಿರ್ಣಯ ಕೈಗೊಂಡಿರುವ ವೀರಶೈವ ಮಹಾಸಭಾ ನಿರ್ಣಯವನ್ನು ಈ ಹಿಂದೆ ವಿರೋಧ ವ್ಯಕ್ತಪಡಿಸಿದ್ದ ಬಿ.ಎಸ್.ಯಡಿಯೂರಪ್ಪ ಮತ್ತು ಪಂಚಾಚಾರ್ಯರು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.
ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭೆಯ 24ನೇ ಅಧಿವೇಶನದಲ್ಲಿ ಕೈಗೊಂಡಿರುವ 8 ನಿರ್ಣಯಗಳನ್ನು ಜಾಗತಿಕ ಲಿಂಗಾಯತ ಮಹಾಸಭೆ ಸ್ವಾಗತಿಸುತ್ತದೆ ಮತ್ತು ಅಭಿನಂದಿಸುತ್ತದೆ‌. ಅದರಲ್ಲಿ ಪ್ರಮುಖವಾಗಿ ಮುಂಬರುವ ಜನಗಣತಿಯಲ್ಲಿ ಎಲ್ಲ ಲಿಂಗಾಯತರು ಧರ್ಮದ ಕಾಲಂನಲ್ಲಿ ಹಿಂದೂ ಎಂದು ಬರೆಸಬಾರದು. ಲಿಂಗಾಯತ-ವೀರಶೈವ ಎಂದು ಬರೆಸಬೇಕು ಎಂದು ಕರೆ ಕೊಟ್ಟಿದೆ. 119 ವರ್ಷಗಳ ಇತಿಹಾಸವಿರುವ ಮಹಾಸಭಾ ನಿರ್ಣಯ ಕೈಗೊಂಡಿದೆ. ಬಸವ ತತ್ವವೇ ನಿತ್ಯ, ಶರಣ ಧರ್ಮವೇ ಸತ್ಯ ಎಂಬ ಅರಿವಾಗಿದೆ.2017ರಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟವನ್ನು ಹತ್ತಿಕ್ಕಲು ಕೈ ಜೋಡಿಸಿದವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ. ಯಡಿಯೂರಪ್ಪ ಮತ್ತು ಅವರ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇಬ್ಬರು ಅಧಿವೇಶನದಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದಾರೆ.
ಯಡಿಯೂರಪ್ಪ ಅವರ ಮಗಳು ಮಹಾಸಭಾ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ. ಲಿಂಗಾಯತರು ಹಿಂದೂಗಳಲ್ಲ ಎಂಬ ನಿರ್ಣಯವನ್ನು ಒಪ್ಪುತ್ತಾರೋ? ಇಲ್ಲವೋ?, 2018ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ನಿರ್ಣಯಕ್ಕೆ ಬದ್ಧ ಎಂದು ಯಡಿಯೂರಪ್ಪ ಆಶ್ವಾಸನೆ ನೀಡಿದ್ದರು. ಈಗ ಅದೇ ವೀರಶೈವ ಮಹಾಸಭೆ ಲಿಂಗಾಯತರು ಹಿಂದೂಗಳಲ್ಲ ಎಂದು ಘೋಷಿಸಿದೆ. ಈಗ ಯಡಿಯೂರಪ್ಪನವರ ನಿಲುವು ಏನು? ಎಂಬುದನ್ನು ಸ್ಪಷ್ಟಪಡಿಸಲಿ.
ಕೇಂದ್ರ ಸಚಿವ ಅಮಿತ್ ಶಾ, ಆರ್​ಎಸ್​ಎಸ್‌ ಮುಖ್ಯಸ್ಥ ಮೋಹನ್ ಭಾಗವವತ್, ಯಡಿಯೂರಪ್ಪ, ಪಂಚಾಚಾರ್ಯರು ಲಿಂಗಾಯತ ಧರ್ಮದ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸಿ, ಹಿಂದೂ ಧರ್ಮ ಒಡೆಯಲು ಬಿಡುವುದಿಲ್ಲ ಎಂದು ನೀಡಿದ್ದ ಹೇಳಿಕೆಗಳ ಪತ್ರಿಕಾ ಪ್ರಕಟಣೆಗಳನ್ನು ಪ್ರದರ್ಶಿಸಿ ಜಾಮದಾರ ಅಸಮಾಧಾನ ವ್ಯಕ್ತಪಡಿಸಿದರು.
ದಾವಣಗೆರೆ ಅಧಿವೇಶನದಲ್ಲಿ ಪಂಚಪೀಠಗಳ ಪೈಕಿ ಮೂವರು ಪಂಚಾಚಾರ್ಯರು ಭಾಗಿಯಾಗಿದ್ದರು. ಅವರ ಸಮ್ಮುಖದಲ್ಲಿಯೇ ಮಹಾಸಭಾ ಲಿಂಗಾಯತರು ಹಿಂದೂಗಳಲ್ಲ ಎಂದು ನಿರ್ಣಯ ಕೈಗೊಂಡಿದೆ. ಇದನ್ನು ಪಂಚಾಚಾರ್ಯರು ಒಪ್ಪಿಕೊಳ್ಳುತ್ತಾರಾ?, ಖಂಡಿಸುತ್ತಾರಾ? ಇಲ್ಲವೇ ಲಿಂಗಾಯತರ ಭಾವನೆಗಳನ್ನು ಒಪ್ಪಿ ತೆಪ್ಪಗೆ ಕುಳಿತುಕೊಳ್ಳುತ್ತಾರಾ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು.
ವೀರಶೈವ ಲಿಂಗಾಯತ ಸೇರಿಸಿ ಹೋದರೆ ಪ್ರತ್ಯೇಕ ಧರ್ಮ ಸಿಗುವುದಿಲ್ಲ. ವೀರಶೈವ ಹಿಂದೂ ಧರ್ಮದ ಒಂದು ಭಾಗ. ಹಾಗಾಗಿ ಅದು ಲಿಂಗಾಯತ ಧರ್ಮದ ಭಾಗವಲ್ಲ. ಆ ನಿಟ್ಟಿನಲ್ಲಿ ನಮ್ಮ ಹೋರಾಟ ನಿಂತಿಲ್ಲ, ಮುಂದುವರಿದಿದೆ. ಆದರೆ, ರ‍್ಯಾಲಿಗಳನ್ನು ಮಾಡುವುದಿಲ್ಲ. ಇನ್ನು ವಚನಗಳಿಂದ ಈಗ ಎಲ್ಲರಿಗೂ ನಾವು ಲಿಂಗಾಯತರು ಎಂಬ ಅರಿವು ಗೊತ್ತಾಗಿದೆ. ದಾವಣಗೆರೆ ಅಧಿವೇಶನದಲ್ಲಿ ಎಲ್ಲ ಪಕ್ಷಗಳ ಮುಖಂಡರು, ಸ್ವಾಮೀಜಿಗಳು ಮಾತಾಡಿದ್ದು ಬಸವಣ್ಣನವರ ಬಗ್ಗೆಯೇ? ಅಲ್ಲಿ ಯಾವುದೇ ರೀತಿ ರೇಣುಕರು, ಪಂಚಾಚಾರ್ಯರು, ವೀರಶೈವದ ಬಗ್ಗೆ ಏನೂ ಚರ್ಚೆ ಆಗಲಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ರೊಟ್ಟಿ ಉಪಸ್ಥಿತರಿದ್ದರು.