ಬೆಂಗಳೂರು: ದಾವಣಗೆರೆ ವೀರಶೈವ ಲಿಂಗಾಯತ ಸಮಾವೇಶದ ಯಶಸ್ಸಿನಿಂದ ಬೆಚ್ಚಿ ಬಿದ್ದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ತಾವೂ ಅಂತಹ ಸಮಾವೇಶ ಏರ್ಪಡಿಸಲು ತೆರೆಮರೆಯ ಸಿದ್ದತೆ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ಚಿತ್ರದುರ್ಗದಲ್ಲಿ ಮತ್ತೊಮ್ಮೆ ಅಹಿಂದ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಸಮಾವೇಶದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುವ ನಿರೀಕ್ಷೆ ಇದೆ. ಈ ಮೂಲಕ ಶಕ್ತಿ ಪ್ರದರ್ಶನಕ್ಕೆ ಇಳಿಯಲಿದ್ದಾರೆ.

ಜಾತಿಗಣತಿ ವಿರುದ್ಧ ಒಕ್ಕಲಿಗ, ಲಿಂಗಾಯತರು ಸಿಡಿದೆದ್ದಿದ್ದಾರೆ. ಅಹಿಂದ ದಾಳದ ಬಳಕೆಗೆ ಸಿಎಂ ಸಿದ್ಧರಾಮಯ್ಯ ಮುಂದಾದಂತೆ ಕಾಣುತ್ತಿದೆ. ಒಕ್ಕಲಿಗ, ಲಿಂಗಾಯತರ ವಿರುದ್ಧ ಅಹಿಂದ ಕೌಂಟರ್ ನೀಡುವ ಸಾಧ್ಯತೆ ಇದ್ದು, ಅಹಿಂದ ಸಮುದಾಯಗಳಿಂದ ಭರ್ಜರಿ ಸಮಾವೇಶಕ್ಕೆ ಸಿದ್ಧತೆ ಮಾಡಲಾಗುತ್ತಿದೆ. ಚಿತ್ರದುರ್ಗದಲ್ಲಿ ಶೋಷಿತ ಸಮುದಾಯಗಳ ಐಕ್ಯತಾ ಸಮಾವೇಶ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಶೋಷಿತ, ಹಿಂದುಳಿದ ಜಾತಿಗಳ ಒಕ್ಕೂಟದಿಂದ ಸಮಾವೇಶ ಮಾಡಲಾಗುತ್ತಿದೆ. ಕಾಂತರಾಜು ವರದಿ ಬಿಡುಗಡೆಗೆ ಒತ್ತಾಯಿಸಿ ಬೃಹತ್ ಸಮಾವೇಶ ಮಾಡಲಾಗುತ್ತಿದೆ. ಚಿತ್ರದುರ್ಗದ ಮಾದಾರ ಚನ್ನಯ್ಯ ಮಠದ ಬಳಿ ಸಮಾವೇಶಕ್ಕೆ ಪ್ಲಾನ್ ಮಾಡಲಾಗಿದೆ. ಸ್ಥಳ ಪರಿಶೀಲನೆ ನಡೆಸಿದ ಹಿಂದುಳಿದ ವರ್ಗಗಳ ಮುಖಂಡರು, ಹಿಂದುಳಿದ ವರ್ಗಗಳ ಒಕ್ಕೂಟ ಅಧ್ಯಕ್ಷರಿಂದ ಸ್ಥಳ ಪರಿಶೀಲನೆ ಮಾಡಲಾಯಿತು. ಬಹುದೊಡ್ಡ ಸಮಾವೇಶ ನಡೆಯುವ ಸಾಧ್ಯತೆ ಇದ್ದು, ಅಹಿಂದ ಸಮಾವೇಶದ ಮೂಲಕ ರಾಜಕೀಯ ವಿರೋಧಿಗಳಿಗೆ ಸಿಎಂ ಠಕ್ಕರ್ ಕೊಡಲು ಚಿಂತಿಸುತ್ತಿದ್ದಾರೆ. ಚಿತ್ರದುರ್ಗಕ್ಕೆ ಭೇಟಿ ನೀಡಿ ಸಿಎಂ ಆಪ್ತರಿಂದ ಸಮಾವೇಶದ ಸಮಾಲೋಚನೆ ನಡೆಸಲಿದ್ದಾರೆ.

ಹಿಂದುಳಿದ ವರ್ಗಗಳ ನಾಯಕ ಸ್ಥಾನಕ್ಕೆ ಸಿಕ್ಕಾಪಟ್ಟೆ ಪೈಪೋಟಿ ನಡೆಯುತ್ತಿದೆ. ಚಿತ್ರದುರ್ಗದಲ್ಲಿ ಮತ್ತೊಮ್ಮೆ ಅಹಿಂದ ಸಮಾವೇಶ ನಡೆಯಲಿದ್ದು, ಅದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಬೆನ್ನೆಲುಬಾಗಿ ನಿಲ್ಲಲಿದ್ದಾರೆ. ಈಗಾಗಲೇ ಈ ಸಂಬಂಧ ಎಲ್ಲಾ ಸಿದ್ದತೆಗಳು ನಡೆಯುತ್ತಿವೆ.

ಜಾತಿ ಗಣತಿ ವರದಿಗೆ ಹಲವರ ವಿರೋಧವಿದೆ. ಹಲವರ ಬೆಂಬಲವೂ ಇದೆ. ಸಿದ್ದರಾಮಯ್ಯ ಬೆಂಬಲಿಗರಿಂದ ಸದ್ಯ ಜಾತಿ ಗಣತಿ ವರದಿ ಜಾರಿಗೆ ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶ ನಡೆಸಲು ಯೋಜನೆ ರೂಪಿಸಲಾಗಿದೆ. ಸಿದ್ದರಾಮಯ್ಯ ಆಪ್ತರು ಆಗಾಗ ಸಿದ್ದರಾಮೋತ್ಸವ ಹಾಗೂ ಸಮಾವೇಶಗಳನ್ನು ಮಾಡುವ ಮೂಲಕ ತನ್ನ ನಾಯಕನ ಶಕ್ತಿ ಪ್ರದರ್ಶನವನ್ನು ಮಾಡುತ್ತಲೇ ಇರುತ್ತಾರೆ.

ಈಗಾಗಲೇ ಲೋಕಸಭಾ ಚುನಾವಣೆಯ ತಯಾರಿ ಜೋರಾಗಿದೆ. ಇದರ ನಡುವೆ ಬಿಜೆಪಿ ನಾಯಕರು ಲೋಕಸಭೆಯ ಬಳಿಕ ಸರ್ಕಾರ ಬೀಳಲಿದೆ ಎಂದೇ ಹೇಳುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ನಾಯಕರು ತಯಾರಿಯಲ್ಲಿ ಎಚ್ಚರದಿಂದ ಇದ್ದಾರೆ. ಬಿಜೆಪಿ ನಾಯಕರ ಹೇಳಿಕೆಗಳನ್ನು ಅಲ್ಲಗಳೆಯುವ ಕೆಲಸ ಮಾಡಲು ಹೊರಟಿದ್ದಾರೆ. ಇದರ ನಡುವೆ ಸಿದ್ದರಾಮಯ್ಯ ಅವರ ಶಕ್ತಿ ಹಾಗೆ ಇದೆ ಎಂದು ಸಾಬೀತು ಮಾಡಲು ಬೆಂಬಲಿಗರು ಹೊರಟಿದ್ದಾರೆ.