ಬೆಳಗಾವಿ: ನಗರಕ್ಕೆ ಹೊಂದಿಕೊಂಡಿರುವ ಮಚ್ಛೆ ಗ್ರಾಮದಲ್ಲಿ ಶ್ರೀ ಬ್ರಹ್ಮಲಿಂಗ ದೇವರ ಜಾತ್ರಾ ಮಹೋತ್ಸವದಂಗವಾಗಿ ಅಳವಡಿಸಲಾಗಿದ್ದ ಕನ್ನಡ ಬಾವುಟವನ್ನು ಕಿಡಿಗೇಡಿಗಳು ತೆರವುಗೊಳಿಸಿದ್ದರಿಂದ ಮಂಗಳವಾರ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಂಬಲಿತ ಕೆಲವರು ಭಗವಾ ಧ್ವಜ ಅಳವಡಿಸಿದ್ದರಿಂದ ಕನ್ನಡ ಹೋರಾಟಗಾರರು ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಆವರಣದಲ್ಲಿನ ಮರದ ಮೇಲೆ ಸೋಮವಾರ ಕನ್ನಡ ಧ್ವಜ ಅಳವಡಿಸಿದ್ದರು. ಅದನ್ನು ರಾತ್ರಿ ಕಿಡಿಗೇಡಿಗಳು ತೆರವುಗೊಳಿಸಿದ್ದರಿಂದ ಮಂಗಳವಾರ ಮತ್ತೆ ಕನ್ನಡ ಬಾವುಟ ಅಳವಡಿಸಲು ಮುಂದಾದರು.
ಆಗ ಪೊಲೀಸರು ಮತ್ತು ಹೋರಾಟಗಾರರ ಮಧ್ಯೆ ವಾಗ್ವಾದ ನಡೆಯಿತು. ಪೊಲೀಸರು ಕೆಲವು ಹೋರಾಟಗಾರರನ್ನು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು.
‘ನಾಡಧ್ವಜ ತೆರವು ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಮಚ್ಛೆಯಲ್ಲಿ ಈಗ ಪರಿಸ್ಥಿತಿ ಹತೋಟಿಯಲ್ಲಿದ್ದು, ನಾಡಧ್ವಜ ಹಾರಾಡುತ್ತಿದೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.