ಬೆಳಗಾವಿ: ‘ನಾವೆಲ್ಲರೂ ಮಕ್ಕಳ ಜೀವ ಮತ್ತು ಜೀವನದೊಂದಿಗೆ ಕೆಲಸ ಮಾಡುವವರು. ಹಾಗಾಗಿ ಇಲಾಖೆಗೆ ಕೆಟ್ಟ ಹೆಸರು ಬಾರದಂತೆ ಶಿಸ್ತಿನಿಂದ ಕರ್ತವ್ಯ ನಿರ್ವಹಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ನಿರ್ದೇಶನ ನೀಡಿದರು.
ಇಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎಲ್ಲ ಜಿಲ್ಲೆಗಳ ಉಪನಿರ್ದೇಶಕರೊಂದಿಗೆ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಪ್ರತಿಯೊಬ್ಬರೂ ಆಯಾ ಜಿಲ್ಲೆಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಇಲಾಖೆ ಕಾರ್ಯವೈಖರಿ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಬೇಕು. ಆಹಾರದ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಒಂದು ಮಗುವಿಗೂ ಕಳಪೆ ಆಹಾರ ನೀಡಬಾರದು. ಎಲ್ಲಿಯೂ ಸಮಸ್ಯೆಯಾಗಬಾರದು’ ಎಂದು ಸೂಚಿಸಿದರು.
‘ಕ್ಷೀರಭಾಗ್ಯ ಯೋಜನೆಯಡಿ ಎಲ್ಲ ಫಲಾನುಭವಿಗಳಿಗೆ ಹಾಲಿನ ಪೌಡರ್ ಕಡ್ಡಾಯವಾಗಿ ತಲುಪಬೇಕು. ಯಾವುದೇ ಗೊಂದಲ ಸೃಷ್ಟಿಯಾಗದಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಏನೇ ಸಮಸ್ಯೆಗಳಿದ್ದರೂ ತಕ್ಷಣವೇ ನನ್ನ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು’ ಎಂದ ಅವರು, ‘ನಿರಂತರವಾಗಿ ಸಭೆ ನಡೆಸಿ, ಅಂಗನವಾಡಿ ಕಾರ್ಯಕರ್ತೆಯರ ಅಹವಾಲು ಆಲಿಸಬೇಕು’ ಎಂದು ಸೂಚಿಸಿದರು. ಇಲಾಖೆ ಕಾರ್ಯದರ್ಶಿ ಡಾ.ಜಿ.ಸಿ.ಪ್ರಕಾಶ್, ನಿರ್ದೇಶಕಿ ಅರ್ಚನಾ, ವಿಶೇಷ ಕರ್ತವ್ಯಾಧಿಕಾರಿ ನಿಶ್ಚಲ ಬಿ.ಎಚ್ ಇತರರಿದ್ದರು.
ಇಲಾಖೆಗೆ ಕೆಟ್ಟ ಹೆಸರು ಬಾರದಂತೆ ಕೆಲಸ ಮಾಡಿ: ಹೆಬ್ಬಾಳಕರ
