ಬೆಳಗಾವಿ: ಮುಂಗಾರು ಮಳೆಯ ವಿಫಲತೆಯಿಂದಾಗಿ ಆಲಮಟ್ಟಿ, ಮಲಪ್ರಭಾ, ಹಿಪ್ಪರಗಿ ಮತ್ತು ಹಿಡಕಲ್ ಜಲಾಶಯಗಳಲ್ಲಿ ನೀರಿನ ಮಟ್ಟ ತೀವ್ರವಾಗಿ ಕಡಿಮೆಯಾಗಿರುವುದರಿಂದ ಜಲಾಶಯಗಳಲ್ಲಿ ಸಂಗ್ರಹವಾದ ನೀರನ್ನು ವ್ಯವಸ್ಥಿತವಾಗಿ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡಬೇಕೆಂದು ಪ್ರಾದೇಶಿಕ ಆಯುಕ್ತರಾದ ನಿತೇಶ್ ಪಾಟೀಲ ಅವರು ಸೂಚಿಸಿದ್ದಾರೆ.

ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಡೆದ ಆಲಮಟ್ಟಿ ಜಲಾಶಯ, ಮಲಪ್ರಭಾ ಯೋಜನೆ , ಘಟಪ್ರಭಾ ಯೋಜನೆ ಮತ್ತು ಹಿಪ್ಪರಗಿ ಯೋಜನೆ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಸ್ತುತ ಬೆಳಗಾವಿ ಜಿಲ್ಲೆಯ ಹಿರಣ್ಯಕೇಶಿ ನದಿಗೆ ಅಲ್ಪ ಪ್ರಮಾಣದ ನೀರಿನ ಒಳ ಹರಿವು ಪ್ರಾರಂಭವಾಗಿದ್ದು, ದಿನಾಂಕ:07.07.2023 ರಂದು ಘಟಪ್ರಭಾ ನದಿಯ ಧೂಪದಾಳ ವೇಯರ್ ನೀರಿನ ಮಟ್ಟ 2008.5 ಅಡಿ ತಲುಪುವ ಸಾಧ್ಯತೆ ಇರುತ್ತದೆ. ಆದರೆ ಘಟಪ್ರಭಾ ನದಿಯ ಕೆಳಗಡೆ ಇರುವ 14 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪೈಕಿ ಈಗಾಗಲೇ  ಬೆಳಗಾವಿ ಜಿಲ್ಲೆಯ ಹುಲಕುಂದ, ಬಾಗಲಕೋಟೆ ಜಿಲ್ಲೆಯ ಸೈದಾಪೂರ, ಅರಕೆರೆ, ಚಿಂಚಲಕಟ್ಟಿ ಅನವಾಲ ಮತ್ತು ಕಟಗೇರಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸ್ಥಗಿತಗೊಂಡಿರುತ್ತವೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಅವಲಂಬಿತ ಗ್ರಾಮಗಳಿಗೆ ಕುಡಿಯುವ ನೀರಿನ ಅಭಾವ ತಪ್ಪಿಸಲು ಹಿರಣ್ಯಕೇಶಿ ನದಿಯಿಂದ ಘಟಪ್ರಭಾ ನದಿಗೆ ಬರುವ ನೀರಿನ ಒಳ ಹರಿವಿನಿಂದ ಧೂಪದಾಳ ವೇಯರ್ ನೀರಿನ ಮಟ್ಟ 2008.5 ಅಡಿ ತಲುಪಿದ ನಂತರ ಹೆಚ್ಚುವರಿಯಾದ ನೀರನ್ನು ಘಟಪ್ರಭಾ ನದಿಗೆ ಹರಿಬಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತರು ಸೂಚಿಸಿದರು. 

ನೀರಾವರಿ ಉದ್ದೇಶಕ್ಕಾಗಿ ನೀರಾವರಿ ಸಲಹಾ ಸಮಿತಿಯಿಂದ ಅಥವಾ ಸರ್ಕಾರದಿಂದ ಅನುಮತಿ ಪಡೆದು ಕ್ರಮಕೈಗೊಳ್ಳಬಹುದು ಎಂದು ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ ನಿರ್ದೇಶನ ನೀಡಿದರು.