ವ್ಯಾಕ್ಸಿನ್ ಡಿಪೋದಲ್ಲಿ : ಗೊಂದಲ ಪರಿಹರಿಸಲು ಸಚಿವ ಸತೀಶ್ ಜಾರಕಿಹೊಳಿ ನಿರ್ದೇಶನ
ಬೆಳಗಾವಿ,: ವ್ಯಾಕ್ಸಿನ್ ಡಿಪೋ ದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿ ಆರಂಭಿಸಿರುವುದಕ್ಕೆ ಸಂಬಂಧಿಸಿದಂತೆ ಸ್ಮಾರ್ಟ್ ಸಿಟಿ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳ ಜಂಟಿ ಸಭೆ ನಡೆಸಿ ಗೊಂದಲವನ್ನು ಬಗೆಹರಿಸಿಕೊಳ್ಳಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.
ಬೆಳಗಾವಿ ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸ್ಮಾರ್ಟ್ ಸಿಟಿ ಅನುಷ್ಠಾನ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ವ್ಯಾಕ್ಸಿನ್ ಡಿಪೋದಲ್ಲಿನ ಕಾಮಗಾರಿಗೆ ಅನುಮತಿ ಪಡೆದುಕೊಂಡಿರುವ ಹಾಗೂ ಕಾಮಗಾರಿ ಪೂರ್ಣಗೊಂಡ ಬಳಿಕ ಸಮರ್ಪಕ ನಿರ್ವಹಣೆಯ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಬೇಕು ಎಂದರು.
ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭಿಸಲು ಆರೋಗ್ಯ ಇಲಾಖೆಯಿಂದ ಯಾವುದೇ ರೀತಿಯ ಪರವಾನಿಗೆ ನೀಡಿರುವುದಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಕೇವಲ ಹೆರಿಟೇಜ್ ಪಾರ್ಕ್ ಅಭಿವೃದ್ಧಿಪಡಿಸಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ. ಆದ್ದರಿಂದ ಈ ಗೊಂದಲಕ್ಕೆ ಸ್ಪಷ್ಟೀಕರಣ ನೀಡುವದಲ್ಲದೇ, ಒಂದು ವೇಳೆ ಲಿಖಿತವಾಗಿ ಪರವಾನಿಗೆ ನೀಡಿದ್ದರೆ ಅಧಿಕಾರಿಗಳು ವಿವರಣೆ ನೀಡಬೇಕು ಎಂದು ಹೇಳಿದರು.
ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶನ:
ಸ್ಮಾರ್ಟ್ ಸಿಟಿ ಯೋಜನೆಯಡಿ ಉಳಿತಾಯವಾಗಿರುವ 19 ಕೋಟಿ ರೂಪಾಯಿಗೆ ಸಂಬಂಧಿಸಿದಂತೆ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಬೇಕು. ನಗರ ಬಸ್ ನಿಲ್ದಾಣ ಮತ್ತು ಟಿಳಕವಾಡಿಯ ಕಲಾಮಂದಿರ ಸೇರಿದಂತೆ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ವಿಶ್ವೇಶ್ವರಯ್ಯ ನಗರದಲ್ಲಿ 51 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗಿರುವ ಇಂಟಿಗ್ರೇಟೆಡ್ ಕಮಾಂಡ್ ಅಂಡ್ ಕಂಟ್ರೋಲ್ ಸೆಂಟರ್ ಅನ್ನು ಮಹಾನಗರ ಪಾಲಿಕೆ, ಪೊಲೀಸ್, ಆರೋಗ್ಯ, ಸಾರಿಗೆ ಮತ್ತಿತರ ಇಲಾಖೆಯವರು ಪ್ರಯೋಜನ ಪಡೆದುಕೊಳ್ಳಬೇಕು. ಉಳಿತಾಯದ ಹಣ ಬಳಕೆಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಿದ್ಧಪಡಿಸಿದ ಬಳಿಕ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ತಿಳಿಸಿದರು.