ಬೆಳಗಾವಿ : ಭಾರೀ ಕುತೂಹಲ ಮೂಡಿಸಿದ್ದ ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ನೇತೃತ್ವದ ಪುನಶ್ಚೇತನ ಪ್ಯಾನೆಲ್ ಭರ್ಜರಿ ಗೆಲುವು ಸಾಧಿಸಿದೆ.
ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಠ್ಠಲ ಹಲಗೇಕರ್ ನೇತೃತ್ವದ ಪ್ಯಾನೆಲ್ ನಿಂದ ಸ್ಫರ್ಧಿಸಿದ್ದ ಎಲ್ಲ 15 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದು, ವಿರೋಧಿ ಪ್ಯಾನೆಲ್ ಗಳು ಧೂಳಿಪಟವಾಗಿವೆ.
ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾರ್ಖಾನೆಯ ಎದುರು ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ರೈತರು ನಮ್ಮ ಮೇಲೆ ವಿಶ್ವಾಸವಿಟ್ಟು ಅಭೂತಪೂರ್ವ ಗೆಲುವು ನೀಡಿದ್ದಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಹಾಗೆಯೇ ಎಲ್ಲ ಕಾರ್ಮಿಕರಿಗೂ ಸಹ ಕೃತಜ್ಞತೆ ಸಲ್ಲಿಸುತ್ತೇವೆ. ಅವರ ವಿಶ್ವಾಸಕ್ಕೆ ತಕ್ಕಂತೆ ಆಡಳಿತ ನಡೆಸುತ್ತೇವೆ ಎಂದರು.
ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವುದು ಖಚಿತ. ಎಲ್ಲರ ವಿಶ್ವಾಸಕ್ಕೆ ತಕ್ಕಂತೆ ಕೆಲಸ ಮಾಡಲಾಗುವುದು ಎಂದರು.

ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ನೇತೃತ್ವದ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಪುನಶ್ಚೇತನ ರೈತರ ಪೆನಲ್ ನಡಿ ಸಾಮಾನ್ಯ ಮತಕ್ಷೇತ್ರದಿಂದ ಸ್ಫರ್ಧಿಸಿದ್ದ ಚನ್ನರಾಜ ಬಸವರಾಜ ಹಟ್ಟಿಹೊಳಿ(4731), ಶ್ರೀಕಾಂತ ನಾಗಪ್ಪ ಇಟಗಿ(4424), ಶಿವನಗೌಡ ದೊಡಗೌಡ ಪಾಟೀಲ(4349), ಶಂಕರ ಪರಪ್ಪ ಕಿಲ್ಲೇದಾರ(4245), ಶ್ರೀಶೈಲ ಬಸಪ್ಪಾ ತುರಮರಿ(4183), ಶಿವಪುತ್ರಪ್ಪ ಬಸವಣ್ಣೆಪ್ಪ ಮರಡಿ(3838), ರಘು ಚಂದ್ರಶೇಖರ ಪಾಟೀಲ(3829), ರಾಮನಗೌಡ ಸಣಗೌಡ ಪಾಟೀಲ(3735), ಸುರೇಶ ಯಲ್ಲಪ್ಪಾ ಹುಲಿಕಟ್ಟಿ(3668), ಪ್ರವರ್ಗ-ಅ ಮತಕ್ಷೇತ್ರದಿಂದ ಫಕ್ಕೀರಪ್ಪ ಫಕ್ಕೀರಪ್ಪ ಸಕ್ರೆಣ್ಣವರ(4142), ಪ್ರವರ್ಗ-ಬ ಮತಕ್ಷೇತ್ರದಿಂದ ಶಂಕರೆಪ್ಪ ಸದೆಪ್ಪ ಹೊಳಿ(4507), ಮಹಿಳಾ ಮತಕ್ಷೇತ್ರದಿಂದ ಲಲಿತಾ ಭಾಲಚಂದ್ರ ಪಾಟೀಲ(4041), ಸುನಿತಾ ಮಹಾಂತೇಶ ಲಂಗೋಟಿ(3913), ಪರಿಶಿಷ್ಟ ಜಾತಿ ಮತಕ್ಷೇತ್ರದಿಂದ ಬಾಳಪ್ಪ ದುರಗಪ್ಪ ಪೂಜಾರ(3827) ಹಾಗೂ ಪರಿಶಿಷ್ಟ ಪಂಗಡ ಮತಕ್ಷೇತ್ರದಿಂದ ಭರಮಪ್ಪ ಕಲ್ಲಪ್ಪ ಶಿಗೆಹಳ್ಳಿ (4161) ಮತಗಳನ್ನು ಪಡೆದು ಜಯಶಾಲಿಗಳಾಗಿ ಆಯ್ಕೆಯಾದರು.
ಎಲ್ಲ 15ನಿರ್ದೇಶಕ ಸ್ಥಾನಗಳು ಚನ್ನರಾಜ ಹಟ್ಟಿಹೊಳಿ ನೇತೃತ್ವವದ ಮಲಪ್ರಭಾ ಪುನಶ್ಚೇತನ ಪೆನಲ್ ಗೆ ಒಲಿದವು.