ಬೆಳಗಾವಿ,: ಲಿಂಗಾಯತ ಧರ್ಮವನ್ನು ಬಸವಣ್ಣನವರು ಸ್ಥಾಪಿಸಿದ್ದಾರೆ ಎಂಬ ದಾಖಲೆಗಳಿಲ್ಲ. ಕೆಲವು ಸ್ವಾಮೀಜಿಗಳು, ರಾಜಕಾರಣಿಗಳು ಬಸವಣ್ಣನವರ ವಿಚಾರಧಾರೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
ಬುಧವಾರ‌ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದಬಾಗೇವಾಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಸವಣ್ಣನವರು ಸ್ವತಃ ಶಿವ ಭಕ್ತರಿದ್ದರು‌. ಬಸವಣ್ಣನವರ ವಚನದಲ್ಲಿ ಕೂಡಲಸಂಗಮದೇವ ಎಂದು ಇದೆ. ಕೆಲವೊಂದು ನಾಸ್ತಿಕ ಹಾಗೂ ಕಮ್ಯೂನಿಸ್ಟ್‌ ‌ಮೈಡೆಂಡ್ ಸ್ವಾಮೀಜಿಗಳು ಬಸವಣ್ಣನವರನ್ನು ತಮ್ಮ ಮನೆಯ ಆಸ್ತಿ ಮಾಡಿಕೊಂಡಿದ್ದಾರೆ. ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿಲ್ಲ. ವಿರೋಧಿಗಳು ಹೊಯ್ಕೊತ್ತ ಹೊಗ್ತಿರತಾರೆ. ನಾವು ಹಂಗೆ ಹೋಗುವರೆ ಎಂದರು.
ದೇಶದಲ್ಲಿ ಕೇವಲ ಆರು ಧರ್ಮಗಳಿಗೆ ಮಾತ್ರ ಸಂವಿಧಾನದಲ್ಲಿ ಮಾನ್ಯತೆ ಇದೆ. ಲಿಂಗಾಯತ ವೀರಶೈವ ಭಾರತದ ಸಂವಿಧಾನದಲ್ಲಿ ಮಾನ್ಯತೆ ಇಲ್ಲ. ದಲಿತರು ಸೇರಿದಂತೆ ಎಲ್ಲ ಸಮುದಾಯದವರು ಹಿಂದೂ ಎಂದು ಬರೆಸುತ್ತಿದ್ದಾರೆ. ಯಾಕೆಂದರೆ ಹಿಂದೂ ಎಂದು ಬರೆಸದಿದ್ದರೆ ನಮಗೆ ಸಿಗುವ ಸೌಲಭ್ಯಗಳು ಸಿಗುವುದಿಲ್ಲ. ಲಿಂಗಾಯತ ವೀರಶೈವ ಧರ್ಮನೇ ಇಲ್ಲ. ಎಲ್ಲಿಯವರೆಗೆ ಕೇಂದ್ರ ಸರಕಾರ ಅನುಮೋದನೆ ನೀಡುವುದಿಲ್ಲವೋ ಅಲ್ಲಿಯವರೆಗೆ ಸೂಕ್ತವಲ್ಲ ಎಂದರು.
ಉತ್ತರ ಕರ್ನಾಟಕದ ಅಭಿವೃದ್ಧಿ ಆಗಬೇಕು. ನಮ್ಮ ಜನಪ್ರತಿನಿಧಿಗಳು ಗಟ್ಟಿಯಾಗಿ ಮಾತನಾಡಿದ್ದರೆ ನಮಗೊಂದು ಶಕ್ತಿ ಇರುತ್ತಿತ್ತು‌. ನಾವು ಯಾರೂ ಆಗ ದಿ. ಉಮೇಶ ಕತ್ತಿ ಅವರಿಗೆ ಬೆಂಬಲ ಕೊಡಲಿಲ್ಲ. ಯಾವಾಗಲು ರಾಜಕಾರಣದ ವ್ಯವಸ್ಥೆಯಲ್ಲಿ ಬೇಡಿಕೆ ಹಾಗೂ ಅನ್ಯಾಯವನ್ನು ವೇದಿಕೆಯಲ್ಲಿ ಮಾತನಾಡಿದರೆ ನ್ಯಾಯ ಸಿಗುತ್ತದೆ ಎನ್ನುವುದಕ್ಕೆ ಉಮೇಶ ಕತ್ತಿ ಅವರು ನಮಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಒಬ್ಬ ದೊಡ್ಡ ಮರ ಬಿದ್ದ ಹೋದ ಮೇಲೆ ಒಂದು ರೀತಿ ಭೂಕಂಪ ಆಗುತ್ತದೆ ಎನ್ನುತ್ತಾರೆ. ಅದೇ ರೀತಿ ಉಮೇಶ ಕತ್ತಿ ಅವರ ಸಮಾವೇಶ ಮಾಡಿ ಉತ್ತರ ಕರ್ನಾಟಕದಲ್ಲಿ ರಾಜಕೀಯ ತಿರುವು ಕೊಡುವ ಸಮಾವೇಶ ಮಾಡಿದ್ದೇವೆ. ನಾವು ಯಾವಾಗಲು ಉಮೇಶ ಕತ್ತಿ ಅವರ ಕುಟುಂಬದ ಪರವಾಗಿದ್ದೇವೆ ಎಂದು ಹೇಳಿದರು.