ಬೆಳಗಾವಿ: ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ನಿರ್ಮಿಸಲು ಅಗತ್ಯವಿರುವ ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕಿತ್ತೂರು ಮತ್ತು ಬೆಳಗಾವಿ ತಾಲೂಕುಗಳ ಕೆಲವು ಗ್ರಾಮಗಳನ್ಬು ಅಧಿಸೂಚನೆಯಲ್ಲಿ ಸೇರಿಸಲಾಗಿದೆ. ಮೊದಲ ಹಂತದಲ್ಲಿ ಬೆಳಗಾವಿ ತಾಲೂಕಿನ 3 ಗ್ರಾಮಗಳು ಮತ್ತು ಕಿತ್ತೂರು ತಾಲೂಕಿನ 12 ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯಲಿದೆ.
ಪ್ರಯಾಣದ ಸಮಯ ಮತ್ತು ಇಂಧನ ಉಳಿತಾಯದ ಉದ್ದೇಶದಿಂದ ಬೆಳಗಾವಿ- ಕಿತ್ತೂರ- ಧಾರವಾಡ ಹೊಸ ರೈಲು ಮಾರ್ಗ ನಿರ್ಮಾಣವು ದಿ.ಸುರೇಶ ಅಂಗಡಿ ಅವರ ಕನಸಿನ ಯೋಜನೆ.
ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ಯೋಜನೆಗೆ ಕೇಂದ್ರ ಸರ್ಕಾರ ಬಜೆಟನಲ್ಲಿ ಮೊದಲ ಹಂತದಲ್ಲಿ 407 ಎಕರೆ ಭೂಸ್ವಾಧೀನಕ್ಕೆ ಅನುದಾನ ಒದಗಿಸಿತ್ತು. 406 ಎಕರೆ ಫಲವತ್ತಾದ ಭೂಮಿ ಸೇರಿದಂತೆ ಬೆಳಗಾವಿ ತಾಲ್ಲೂಕಿನ 3 ಮತ್ತು ಕಿತ್ತೂರು ತಾಲ್ಲೂಕಿನ 12 ಗ್ರಾಮಗಳ ಭೂಸ್ವಾಧೀನಕ್ಕೆ ಕೆಐಡಿಬಿ ಆದೇಶ ಹೊರಡಿಸಿದೆ. ಇದಕ್ಕೆ ಅನುದಾನವನ್ನೂ ಒದಗಿಸಲಾಗಿದೆ. ಇನ್ನು ಧಾರವಾಡ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಭೂಸ್ವಾಧೀನ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಕೆಲವು ರೈತರು ನ್ಯಾಯಾಲಯದ ಮೊರೆ ಹೋದ ಕಾರಣ ಭೂಸ್ವಾಧೀನ ಪ್ರಕ್ರಿಯೆ ಸ್ಥಗಿತಗೊಂಡಿತ್ತು
ಒಟ್ಟು 73 ಕಿ.ಮೀ. ಉದ್ದದ ರೈಲು ಮಾರ್ಗ ಇದಾಗಿದ್ದು, ಕರವಿನಕೊಪ್ಪ, ಹಿರೇಬಾಗೇವಾಡಿ, ಎಂ.ಕೆ. ಹುಬ್ಬಳ್ಳಿ, ಹೂಲಿಕಟ್ಟಿ, ಕಿತ್ತೂರು, ತೇಗೂರು, ಮಮ್ಮಿಗಟ್ಟಿ, ಕ್ಯಾರಕೊಪ್ಪ ಗ್ರಾಮಗಳು ಭೂಸ್ವಾಧೀನಕ್ಕೆ ಒಳಪಟ್ಟಿವೆ. ಇಲ್ಲಿ ಹೊಸ ರೈಲು ನಿಲ್ದಾಣಗಳನ್ನು ನಿರ್ಮಿಸುವ ಪ್ರಸ್ತಾಪವಿದೆ.
ಮೊದಲ ಹಂತದಲ್ಲಿ ಕಿತ್ತೂರು ತಾಲೂಕಿನಲ್ಲಿ ಹೆಚ್ಚಿನ ಸಂಖ್ಯೆಯ ಹಳ್ಳಿಗಳನ್ನು ಸೇರಿಸಲಾಗಿದೆ. ಬೆಳಗಾವಿ ತಾಲೂಕಿನ ಕೆಲವು ರೈತರ ವಿರೋಧದಿಂದಾಗಿ, ಎರಡನೇ ಹಂತದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಲಿದೆ ಬೆಳಗಾವಿ ತಾಲೂಕಿನ ಹಿರೇ ಬಾಗೇವಾಡಿ, ಮುತ್ನಾಳ, ಹೂಲಿಕಟ್ಟಿ ಹಾಗೂ ಕಿತ್ತೂರು ತಾಲೂಕಿನ ಮರಿಗೇರಿ, ಶಿವನೂರು, ನಿಚ್ಚಣಕಿ, ಕಿತ್ತೂರು, ಬಸಾಪುರ, ಶೀಗಿಹಳ್ಳಿ, ಉಗರಖೋಡ, ಹೊನ್ನಿದಿಬ್ಬ, ಹೂಲಿಕಟ್ಟಿ ಕೆ. ಎ., ಹುಣಶೀಕಟ್ಟಿ, ಕಾದ್ರೋಳ್ಳಿ ಮತ್ತು ಎಂ. ಕೆ. ಹುಬ್ಬಳ್ಳಿ ಗ್ರಾಮಗಳನ್ನು ಸುಗ್ರೀವಾಜ್ಞೆಯಲ್ಲಿ ಸೇರಿಸಲಾಗಿದೆ.
ಈ ರೈಲು ಮಾರ್ಗಕ್ಕಾಗಿ ಮೊದಲ ಹಂತದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 407 ಎಕರೆ 28 ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುವುದು. ಅದರಲ್ಲಿ ಒಂದು ಎಕರೆ 12 ಗುಂಟೆ ಭೂಮಿ ಪಾಳು ಬಿದ್ದಿದೆ. ಉಳಿದ 406 ಎಕರೆ 16 ಗುಂಟೆ ಭೂಮಿ ಫಲವತ್ತಾಗಿದೆ. ಹಾಗಾಗಿ, ಮೊದಲ ಹಂತದಲ್ಲಿ ಕಿತ್ತೂರು ಮತ್ತು ಬೆಳಗಾವಿ ತಾಲೂಕುಗಳ ಕೆಲವು ಗ್ರಾಮಗಳಲ್ಲಿ ಭೂಸ್ವಾಧೀನ ಕಾರ್ಯ ನಡೆಯಲಿದೆ. ಇದಕ್ಕಾಗಿ ಕೆಐಡಿಬಿಯ ಹಿರಿಯ ಅಧಿಕಾರಿಗಳು ಭೂಸ್ವಾಧೀನಕ್ಕೆ ಅನುಮೋದನೆ ನೀಡಿ ಸುಗ್ರೀವಾಜ್ಞೆ ಹೊರಡಿಸಿದ್ದಾರೆ.
ಎಂಟು ದಿನಗಳ ಹಿಂದೆ ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ರೈಲ್ವೆ ಇಲಾಖೆ ಆಡಳಿತದ ಪರಿಶೀಲನಾ ಸಭೆ ನಡೆದಿತ್ತು. ಈ ವೇಳೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ಸಂಸದರು ಸೂಚನೆಗಳನ್ನು ನೀಡಿದ್ದಾರೆ. ನಿಗಧಿತ ಸಮಯದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿದು, ಟೆಂಡರ ಪ್ರಕ್ರಿಯೆ ಶೀಘ್ರದಲ್ಲೇ ನಡೆಯಲಿದೆ ಎಂದು ಅವರು ಹೇಳಿದರು. ಎರಡು ಹಂತಗಳಲ್ಲಿ ಭೂಸ್ವಾಧೀನದ ನಂತರ ನಿಜವಾದ ಕೆಲಸ ಪ್ರಾರಂಭವಾಗಲಿದೆ.
ಬೆಳಗಾವಿ -ಧಾರವಾಡ ನೇರ ರೈಲು ಮಾರ್ಗ: ಭೂಸ್ವಾಧೀನಕ್ಕೆ ಅಧಿಸೂಚನೆ ಪ್ರಕಟ
