ಬೆಳಗಾವಿ: ಪ್ರೀತಿಯ, ಮನಸ್ಸುಗಳ ಭಾವನೆ ಬೆಸೆಯುವ ರಂಗು ರಂಗಿನ ಹೋಳಿ ಹಬ್ಬವನ್ನು ನಗರಾದ್ಯಂತ ಶುಕ್ರವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಅದು ಬೆಳಗಾವಿ ಜನತೆ ಹಾಗೂ ಮಹಿಳೆಯರು, ಚಿಣ್ಣರು ಪರಸ್ಪರ ಬಣ್ಣ ಎರಚಾಟ ನಡೆಸಿ ಪ್ರೀತಿಯ ಬಣ್ಣದಲ್ಲಿ ಮಿಂದೆದ್ದರು.
ಬೆಳಗ್ಗೆಯಿಂದಲೇ ಯುವಕರು ವಿವಿಧ ಪ್ರಮುಖ ರಸ್ತೆಯಲ್ಲಿ ಸಂಚರಿಸುತ್ತಾ ಓಕುಳಿಯಾಟದಲ್ಲಿ ತೊಡಗಿದ್ದರು. ದಾರಿ ಹೋಕರು ಹಾಗೂ ಬೈಕ್‌ನಲ್ಲಿ ಸಾಗುತ್ತಿದ್ದವರಿಗೆ ಹುಡುಗರು ಬಣ್ಣ ಹಚ್ಚಿ ‘ಹ್ಯಾಪಿ ಹೋಳಿ’ ಎನ್ನುತ್ತಾ ಸಂಭ್ರಮಿಸಿದರು. ಹಿರಿಯರು, ಕಿರಿಯರು ಎನ್ನದೇ ಎಲ್ಲರೂ ಸೇರಿ ಓಕುಳಿಯಾಟದಲ್ಲಿ ಪಾಲ್ಗೊಂಡಿದ್ದರು.
ಬೆಳಗಾವಿಯಲ್ಲಿ ಯುವಕರಿಗೆ ರಂಗೇರಿಸಿದ ರಂಗಪಂಚಮಿ:-ಮಹಿಳೆಯರು ಬಣ್ಣಗಳಲ್ಲಿ ಮುಗಳಿದರೆ, ಯುವಕರು- ಹಿರಿಯರು ರಂಗಪಂಚಮಿ ರಂಗೇರಿಸಿಕೊಂಡರು. ಯುವಕರು ಬೈಕ್‌ಗಳಲ್ಲಿ ಸುತ್ತಾಡುತ್ತಿದ್ದರೆ ಜಾತಿ, ಅಂತಸ್ತು, ಭಾಷೆಗಳ ಭೇದ ಮರೆತು ನೆರೆಹೊರೆಯವರೆಲ್ಲ ಸೇರಿ ಪರಸ್ಪರ ಬಣ್ಣ ಹಚ್ಚಿಕೊಂಡು ಶುಭಾಶಯ ಹೇಳಿಕೊಳ್ಳುತ್ತ ಹಬ್ಬ ಆಚರಿಸಿದರು.
ವಿವಿಧ ಕಡೆ ಬಣ್ಣದ ಕಲರವ ಆಯೋಜನೆ: ಬೆಳಗಾವಿ ನಗರ ಇಂದು ವಿವಿಧ ಬಣ್ಣಗಳಿಗೆ ಸಾಕ್ಷಿಯಾಯಿತು. ಎಲ್ಲಿ ನೋಡಿದರು
ಬರೀ ಬಣ್ಣದ್ದೇ ಕಾರುಬಾರು. ಯುವಕರು-ಯುವತಿಯರು, ಮಕ್ಕಳು, ಹಾಗೂ ಮಹಿಳೆಯರು, ಹಿರಿಯರು ಗಲ್ಲಿಗಲ್ಲಿ ಹಾಗೂ ಬೀದಿಯಲ್ಲಿ ಬಣ್ಣವನ್ನು ಎರಚಿ ಸಂಭ್ರಮಿಸಿದರು.
ನಗರದ ಕೆಲವು ಕಡೆಯಲ್ಲಿ ಬಣ್ಣದ ಟೆಂಟ್‌ ಗಳು ಹಾಕಿಕೊಂಡು ಹಾಡಿಗೆ ಕುಣಿದು ಕುಪ್ಪಳಿಸಿದರು. ಪುರುಷರು ಸಿನಿಮಾ ಹಾಡುಗಳಿಗೆ ನೃತ್ಯ ಮಾಡುತ್ತಿದ್ದರೆ, ಮಹಿಳೆಯರು ಹೋಳಿಯ ಸಾಂಪ್ರದಾಯಿಕ ಹಾಡಿಗೆ ಹೆಜ್ಜೆ ಹಾಕಿರುವುದು ಶನಿವಾರ ಕೂಟ್‌ ಬಳಿ ಕಂಡು ಬಂತು, ಮತ್ತೆ ಶೆಟ್ಟಿ ಗಲ್ಲಿ, ಚಾವಟಗಲ್ಲಿ, ಬಡಕದಗಲ್ಲಿ ವಿವಿದ ಕಡೆಯಲ್ಲಿ ರಂಗುರಂಗಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಎಲ್ಲರ ಕೈಯ್ಯಲ್ಲೂ ಬಣ್ಣ ಬಣ್ಣದ ಪುಡಿ, ಬಣ್ಣದ ನೀರು…, ಕಂಡವರ ಮೇಲೆರಚಿ ಮುಗಿಲಿಗೇರಿದ ರಂಗಿಗೆ ‘ಹೋಳೀರೇ ಹೋಳಿ…’ ಎಂದು ಸಂಭ್ರಮಿಸಿದರು.
ಗಮನ ಸೆಳೆದ ಚಿಣ್ಣರ ಬಣ್ಣದಾಟ : ಶಿವಾಜಿನಗರ ಹಾಗೂ ಆರ್‌ ಪಿಡಿ, ಚನ್ನಮ್ಮನಗರದಲ್ಲಿ ಬಣ್ಣದಾಟ, ಬಣ್ಣದ ಬಂಡಿ ಹಾಗೂ ಬಣ್ಣದ ಬ್ಯಾರಲ್ ತುಂಬಿದ ಟ್ರ್ಯಾಕ್ಟರ್ಗಳಿಗೆ ಅವಕಾಶ ಕಲ್ಪಿಸಿದ್ದರಿಂದ ಸಹಜವಾಗಿ ಯುವ ಸಮೂಹ ಹೆಚ್ಚಾಗಿ ಬಣ್ಣದಾಟದಲ್ಲಿ ಪಾಲ್ಗೊಂಡಿದ್ದರು. ನಿರೀಕ್ಷೆ ಮೀರಿ ಜನತೆ ಪಾಲ್ಗೊಂಡಿದ್ದು ಬೆಳಿಗ್ಗೆಯಿಂದಲೇ ಹಲಗೆ ಸಪ್ಪಳ ಹಾಗೂ ಚಿನ್ನರ ಬಣ್ಣದಾಟ ಗಮನಸೆಳೆಯಿತು. ಪೋಷಕರೊಂದಿಗೆ ಮಕ್ಕಳು ಆಗಮಿಸಿದರಿಂದ ಬಣ್ಣದ ಹಬ್ಬಕ್ಕೆ ಮತ್ತಷ್ಟೂ ಮೆರಗು ಹೆಚ್ಚಿಸಿತ್ತು.