ಬೆಳಗಾವಿ,: ಜಿಲ್ಲೆಯಲ್ಲಿ ಅಪಘಾತಗಳ ಪ್ರಮಾಣವನ್ನು ತಗ್ಗಿಸಲು ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ನಗರದಲ್ಲಿ ಸಂಚರಿಸುವ ಆಟೋರಿಕ್ಷಾ-ವಾಹನಗಳಿಗೆ ಕಡ್ಡಾಯವಾಗಿ ಬಾಡಿಗೆ ದರ ನಿಗದಿಪಡಿಸಬೇಕು. ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಅವೈಜ್ಞಾನಿಕವಾಗಿ ಅಳವಡಿಸಲಾಗಿರುವ ತಡೆಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಹಾಪುರ, ಉದ್ಯಮಭಾಗ, ಟಿಳಕವಾಡಿ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ 7 ಸಿಸಿ ಕ್ಯಾಮರಾಗಳು ಚಾಲನೆಯಲಿಲ್ಲ. ಕೂಡಲೇ ತಾಂತ್ರಿಕ ಸಿಬ್ಬಂದಿಗಳಿಗೆ ಕ್ಯಾಮೆರಾ ಸರಿಪಡಿಸಲು ಸೂಚಿಸಬೇಕು ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ತಿಳಿಸಿದರು.
ಬೆಳಗಾವಿ ನಗರದಲ್ಲಿ ಸಂಚರಿಸುತ್ತಿರುವ ಆಟೋ-ರಿಕ್ಷಾಗಳಿಗೆ ದರ ನಿಗದಿಪಡಿಸಬೇಕು. ಕಾಯ್ದಿರಿಸುವ ದರ, ಕನಿಷ್ಠ ದರ, ರಾತ್ರಿವೇಳೆ ದರಗಳನ್ನು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿಗದಿಪಡಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಸಾರ್ವಜನಿಕರಿಂದ ಆಟೋ-ರಿಕ್ಷಾಗಳು ಬೇಕಾಬಿಟ್ಟಿ ಹಣ ಪಡೆಯದಂತೆ ದರ ನಿಗದಿಪಡಿಸಿ, ಸಿಬಿಟಿ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ಆಟೋರಿಕ್ಷಾ ಚಾಲಕರಿಗೆ ಸೂಚನೆ ನೀಡಬೇಕು ಎಂದು ತಿಳಿಸಿದರು.
ನಗರದ ವ್ಯಾಪ್ತಿಯಲ್ಲಿ ಅಳವಡಿಸಲಾದ ಕ್ಯಾಮೆರಾಗಳು ನಿರಂತರ ಚಾಲನೆಯಲ್ಲಿರಬೇಕು. ಇನ್ನು ವಿವಿಧ ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಕೆ ಅಗತ್ಯವಿದ್ದರೆ ಕ್ಯಾಮೆರಾ ಅಳವಡಿಸಬೇಕು. ರಸ್ತೆ ತಿರುವುಗಳಲ್ಲಿ ಅಗತ್ಯ ಮಾಹಿತಿ ಹಾಗೂ ಸೂಚನಾ ಫಲಕ ಅಳವಡಿಸಬೇಕು. ಪದೇ-ಪದೇ ಅಪಘಾತಗಳು ಸಂಭವಿಸುವ ಪ್ರದೇಶ-ಸ್ಥಳಗಳಲ್ಲಿ ಎಚ್ಚರಿಕೆ ಮಾಹಿತಿ ವಿವರದ ಫಲಕ ಹಾಕಬೇಕು ಎಂದರು.
ಅಪಾಯಕಾರಿಯಾಗಿರುವ ಹಾಗೂ ಹೆಚ್ಚು ಅಪಘಾತಗಳು ನಡೆದಿರುವ ಸ್ಥಳಗಳಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಬ್ಲಾಕ್ ಸ್ಪಾಟ್ (ಕಪ್ಪು ಚುಕ್ಕೆ ಪ್ರದೇಶ)ಗಳಲ್ಲಿ ರಸ್ತೆ ದುರಸ್ತಿ ಇರುವ ಬಗ್ಗೆ ವಾಹನ ಸವಾರರು ನಿಧಾನವಾಗಿ ಚಲಿಸುವಂತೆ ಸೂಚಿಸುವ ನಾಮಫಲಕವನ್ನು ಅಳವಡಿಸಬೇಕು.
ರಸ್ತೆ ಅಪಘಾತ ಪೀಡಿತ ವಲಯಗಳ ಗುರುತಿಸಿ ಅಪಘಾತಗಳ ತಡೆಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ರಸ್ತೆ ಸುರಕ್ಷತಾ ನಿಯಮಗಳ ಪಾಲನೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.
ಸಂಚಾರ ನಿಯಮ ಉಲ್ಲಂಘಿಸಿದರೆ ಕ್ರಮ:
ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾತನಾಡಿ, ಮ್ಯಾಪ್ ಮೂಲಕ ರಸ್ತೆಗಳನ್ನು ಗುರುತಿಸಿ, ಅಗತ್ಯ ರಸ್ತೆಗಳನ್ನು ಒನ್ ವೇ ಮಾಡಲೇಬೇಕು. ಈಗಾಗಲೇ ನಗರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆಯಾಗುತ್ತಿದೆ. ವಾಹನ ಸವಾರರಿಗೆ ರಸ್ತೆ ಸುರಕ್ಷತೆ ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಸಣ್ಣ-ಪುಟ್ಟ ಟ್ರಾಫಿಕ್ ಸಮಸ್ಯೆ ಹೊಂದಿರುವ ರಸ್ತೆಗಳನ್ನು ಗುರುತಿಸಿ ಅನಧಿಕೃತ ಪಾರ್ಕಿಂಗ್ ವಾಹನಗಳನ್ನು ತೆರವುಗೊಳಿಸಬೇಕು. ನಗರದಿಂದ ಹೊರ ವಲಯಗಳಲ್ಲಿ, ವೃತ್ತಗಳಲ್ಲಿ, ಮೇಲ್ಸೇತುವೆ ಇರುವ ಸ್ಥಳಗಳಲ್ಲಿ ಟ್ರಾಫಿಕ್ ಸಮಸ್ಯೆಗಳಾಗುತ್ತಿರುವ ಸ್ಥಳಗಳಿಗೆ ಭೇಟಿ ನೀಡಿ ಕೂಡಲೇ ಟ್ರಾಫಿಕ್ ಸಮಸ್ಯೆ ನಿಯಂತ್ರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ತಿಳಿಸಿದರು.

ಏಕಮುಖ ಸಂಚಾರಕ್ಕೆ ನಿರ್ದೇಶನ:
ಚನ್ನಮ್ಮ ವೃತ್ತದ ಬಳಿಯ ಜಿಲ್ಲಾ ಗ್ರಂಥಾಲಯ, ಜಿಲ್ಲಾ ಪಂಚಾಯತ್ ಕಚೇರಿಯ ಸುತ್ತ ಮುತ್ತಲಿನಲ್ಲಿ ಸಾಕಷ್ಟು ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಪಾರ್ಕಿಂಗ್ ಸ್ಥಳ ನಿಗದಿಪಡಿಸಿ, ಒನ್ ವೇ ರಸ್ತೆ ಮಾರ್ಪಡಿಸಿ ಟ್ರಾಫಿಕ್ ನಿಯಂತ್ರಣಕ್ಕೆ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಗಳ ಕಚೇರಿ, ಪ್ರಾದೇಶಿಕ ಆಯುಕ್ತರ ಕಚೇರಿ ಹಾಗೂ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಅನಧಿಕೃತ ಪಾರ್ಕಿಂಗ್ ಮಾಡಿರುವ ವಾಹನಗಳನ್ನು ತೆರವುಗೊಳಿಸಬೇಕು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೃತಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಎಸ್.ಎಸ್. ಸೊಬರದ, ಸಾರಿಗೆ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.