ಬೆಳಗಾವಿ,: ಸುಮಾರು 30 ವರ್ಷಗಳಿಂದ ಬೆಳಗಾವಿಯ ಹಾಗೂ ಸುತ್ತಮುತ್ತಲಿನ ಕಾರ್ಮಿಕರಿಗೆ ಆರೋಗ್ಯ ಸೇವೆ ನೀಡುತ್ತಿದ್ದ ಕಾರ್ಮಿಕ ವಿಮಾ ಆಸ್ಪತ್ರೆಯನ್ನು ನೆಲಸಮಗೊಳಿಸಲು ಸರಕಾರ ಸಿದ್ಧತೆ ನಡೆಸಿದೆ. ಅದರಂತೆ ಈಗಿರುವ ಸಿಬ್ಬಂದಿಗಳನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಹುಬ್ಬಳ್ಳಿ, ದಾಂಡೇಲಿ ಸೇರಿದಂತೆ ವಿವಿಧ ವಿಮಾ ಆಸ್ಪತ್ರೆಗಳಿಗೆ ವರ್ಗಾವಣೆ ಮಾಡಿ, ವೈದ್ಯಕೀಯ ಸೇವೆಗಳ ನಿರ್ದೇಶನಾಲಯ ಅಧಿಸೂಚನೆ ಹೊರಡಿಸಿದ್ದು, ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೇ, ಆರೈಕೆ ಹಾಗೂ ಚಿಕಿತ್ಸಾ ಕಾರ್ಯವನ್ನು ಸ್ಥಗಿತಗೊಳಿಸಿ ಬಾಗಿಲು ಮುಚ್ಚಲಾಗುತ್ತಿದೆ. ಸ್ಥಳೀಯ ಅಧಿಕಾರಿಗಳ ನಿರ್ಲಕ್ಷದಿಂದ ಕಾರ್ಮಿಕರು ಹಾಗೂ ಅವರ ಸಂಬಂಧಿಕರು ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಬಂದೊದಗಲಿದೆ.

1998ರಲ್ಲಿ 50 ಹಾಸಿಗೆಗಳ ಮೂಲಕ ಕಾರ್ಯಾರಂಭ ಮಾಡಿದ ಆಸ್ಪತ್ರೆಯ ಕಟ್ಟಡವು ಕೇವಲ 30 ವರ್ಷಗಳಲ್ಲಿ ಶಿಥಿಲಾವಸ್ಥೆಗೆ ತಲುಪಿತು. 2022ರಲ್ಲಿ ಕೇಂದ್ರೀಯ ಪ್ರಾದೇಶಿಕ ನಿರ್ದೇಶಕರು ಆಸ್ಪತ್ರೆಯ ಕಟ್ಟಡವನ್ನು ಪರಿಶೀಲಿಸಿ, ಇಲ್ಲಿ ರೋಗಿಗಳನ್ನು ದಾಖಲಿಸಲು ಸಾಧ್ಯವಿಲ್ಲ ಎಂಬ ವರದಿಯನ್ನು ನೀಡಿತು. ಆದ್ದರಿಂದ ಈಗಿರುವ ಆಸ್ಪತ್ರೆಯು ಕೇವಲ ರೆಫರಲ್ ಕೇಂದ್ರವಾಗಿ ಮಾರ್ಪಟ್ಟಿತು. ಆದ್ದರಿಂದ 2024ರ ಮಾರ್ಚನಲ್ಲಿ ಈಗಿರುವ ಆಸ್ಪತ್ರೆ ಹಾಗೂ ವಸತಿ ನಿಲಯಗಳನ್ನು ನೆಲಸಮಗೊಳಿಸಿ ನೂತನವಾಗಿ ನಿರ್ಮಿಸಲು 152.20 ಕೋ.ರೂ.ಗಳನ್ನು ಬಿಡುಗಡೆಗೊಳಿಸಲಾಗಿತ್ತು. ಆದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅವಕಾಶ ನೀಡಲಾಗಿತ್ತು. ಆದರೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ನಿರ್ಲಕ್ಷ ತೋರಿದ ಪರಿಣಾಮ ಇದೇ. ದಿ.6 ರಿಂದ ಆಸ್ಪತ್ರೆಯು ಬಾಗಿಲು ಮುಚ್ಚಲಿದೆ. ಕಟ್ಟಡ ನಿರ್ಮಿಸಿ ಹಸ್ತಾಂತರಿಸಲು 3 ವರ್ಷಗಳ ಅವಧಿ ನೀಡಲಾಗಿದೆ.

10 ತಿಂಗಳು ಕಳೆದರೂ ಕೂಡ ಸ್ಥಳೀಯ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾದರು. ವಡ್ಡರವಾಡಿ, ಬಸವೇಶ್ವರ ವೃತ್ತ, ಸಾಂಬ್ರಾ ರಸ್ತೆಯಲ್ಲಿರುವ ಈಗಾಗಲೇ ಅಸ್ತಿತ್ವದಲ್ಲಿರುವ ಆಸ್ಪತ್ರೆಯನ್ನು ಬಾಡಿಗೆ ಆಧಾರದಲ್ಲಿ ಪಡೆದು ಚಿಕಿತ್ಸೆ ನೀಡಲು ಉದ್ದೇಶಿಸಲಾಗಿತ್ತು. ಆದರೆ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷದಿಂದ ಕಟ್ಟಡ ನಿರ್ಣಯಿಸಲು ಸಾಧ್ಯವಾದೇ ಇದ್ದಾಗ, ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ 70ಕ್ಕೂ ಅಧಿಕ ಸಿಬ್ಬಂದಿಗಳನ್ನು ಹುಬ್ಬಳ್ಳಿ ದಾಂಡೇಲಿ ಹಾಗೂ ಇನ್ನಿತರ ಕಾರ್ಮಿಕ ವಿಮಾ ಆಸ್ಪತ್ರೆಗಳಿಗೆ ವರ್ಗಾಹಿಸಲಾಗಿದೆ. ಬೆಳಗಾವಿಯ ಉದ್ಯಮಭಾಗ ಕೈಗಾರಿಕೆಗಳಲ್ಲಿರುವ ವಿಮಾ ಕಾರ್ಮಿಕರ ಸಂಖ್ಯೆಯೇ 1 ಲಕ್ಷಕ್ಕೂ ಅಧಿಕ. ಸುಮಾರು 3 ಲಕ್ಷ ವಿಮಾ ಸದಸ್ಯರ ಕುಟುಂಬ ಸೇರಿದಂತೆ 9 ಲಕ್ಷಕ್ಕೂ ಅಧಿಕ ಜನರ ಆರೋಗ್ಯ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ.
ಸಂಪೂರ್ಣವಾಗಿ ಆಸ್ಪತ್ರೆಯ ಬಾಗಿಲು ಮುಚ್ಚುವದರಿಂದ ರೋಗಿಗಳಿಗೆ ತೊಂದರೆಯುಂಟಾಗುತ್ತದೆ. ಆಸ್ಪತ್ರೆಯಲ್ಲಿ ಪ್ರತಿದಿನ ಸುಮಾರು 300ಕ್ಕೂ ಅಧಿಕ ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅದರಂತೆ 300ಕ್ಕೂ ಅಧಿಕ ರೋಗಿಗಳು ಡಯಾಲಿಸಿಸ್ ಮೇಲಿರುವ ರೋಗಿಗಳಿಗೆ ಪ್ರತಿದಿನ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿತ್ತು ಅದರಂತೆ ಕ್ಯಾನ್ಸರ್ ರೋಗಿಗಳಿಗೂ ಕೂಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಕೂಲ ಕಲ್ಪಿಸಲಾಗಿತ್ತು. ಆದರೆ ಇವರೆಲ್ಲರಿಗೂ ಆಸ್ಪತ್ರೆಯ ಬಾಗಿಲು ಮುಚ್ಚಿದ್ದರಿಂದ ತೀವ್ರ ತೊಂದರೆ ಅನುಭವಿಸಬೇಕಾಗುವ ಪರಿಸ್ಥಿತಿ ಉಂಟಾಗಲಿದೆ.

ರಕ್ತ ತಪಾಸಣೆ ಹಾಗೂ ಎಕ್ಸ ರೇ ಮಾಡಿಸಲೂ ಕೂಡ ಖಾಸಗಿ ಆಸ್ಪತ್ರೆಗೆ ಅಲೆದಾಡಬೇಕು. ನಿಗಧಿತ ಅವಧಿಯೊಳಗೆ ಸರಕಾರದ ನಿಯಮಾವಳಿಯಂತೆ ಪರ್ಯಾಯ ಕಟ್ಟಡ ಬಾಡಿಗೆ ಆಧಾರದಲ್ಲಿ ಪಡೆದು ಆಸ್ಪತ್ರೆ ಪ್ರಾರಂಭಿಸಿದ್ದರೆ ರೋಗಿಗಳ ಅಲೆದಾಟ ತಪ್ಪುತ್ತಿತ್ತು. ಆದರೆ ಮೇಲಾಧಿಕಾರಿಗಳ ಉದಾಸೀನತೆ ಹಾಗೂ ನಿರ್ಲಕ್ಷದಿಂದ ರೋಗಿಗಳು ತೀವ್ರ ತೊಂದರೆ ಅನುಭವಿಸಬೇಕಾದ ಪರಿಸ್ಥಿತಿ ಉಂಟಾಗಲಿದೆ.
ಆಸ್ಪತ್ರೆಯಲ್ಲಿ 23 ನರ್ಸಿಂಗ್, 12 ಫಾರ್ಮಸಿ, ಮೂವರು ಲ್ಯಾಬ್ ಟೆಕ್ನಿಸಿಯನ್, ಓರ್ವ ಎಕ್ಸರೆ ಟೆಕ್ನಿಸಿಯನ್,15ಕ್ಕೂ ಅಧಿಕ ಡಿ ದರ್ಜೆ, ನಾಲ್ಕು ಜನ ಎಲೆಕ್ಟ್ರಿಷಿಯನ್ ಎಂಟು ಜನ ಆಡಳಿತ ನಿರ್ವಹಿಸುವವರು ಹಾಗೂ ಐದಕ್ಕೂ ಅಧಿಕ ಜನ ವೈದ್ಯರು ಸೇರಿದಂತೆ 70ಕ್ಕೂ ಅಧಿಕ ಸಿಬ್ಬಂದಿಗಳು ಸೇವೆಸಲ್ಲಿಸುತ್ತಿದ್ದರು. ಈ ಮೊದಲು ಆಸ್ಪತ್ರೆಯಲ್ಲಿ ಸ್ತ್ರೀರೋಗ, ನೇತ್ರ, ಶಸ್ತ್ರಚಿಕಿತ್ಸೆ, ಎಲಬು ಕೀಲು, ಚರ್ಮ, ಕಿವಿ-ಮೂಗು-ಗಂಟಲು ಸೇರಿದಂತೆ ವಿವಿಧ ವಿಭಾಗಗಳಿಗೆ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನೆರವೇರಿಸಲಾಗುತ್ತಿತ್ತು. ನಂತರ ಸಿಬ್ಬಂದಿಗಳ ಕೊರತೆಯಿಂದಾಗಿ ಶಸ್ತ್ರಚಿಕಿತ್ಸೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು.