ಬೆಳಗಾವಿ: ಹಸಿರು ಬೆಳಗಾವಿ ನಗರ ನಿರ್ಮಾಣಕ್ಕೆ ಮಹಾನಗರ ಪಾಲಿಕೆ ಪಣ ತೊಟ್ಟಿದೆ. ಆ ನಿಟ್ಟಿನಲ್ಲಿ ರಸ್ತೆ ವಿಭಜಕಗಳಲ್ಲಿ ಸಸಿಗಳನ್ನು ನೆಡಲಾಗಿತ್ತು. ಆದರೆ, ಅವುಗಳಿಗೆ ನೀರುಣಿಸುವುದು ದೊಡ್ಡ ಸವಾಲಾಗಿತ್ತು. ಹಾಗಾಗಿ, ಪಾಲಿಕೆ ಅಧಿಕಾರಿಗಳು ಒಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದು, ಹನಿ ನೀರಾವರಿ ವ್ಯವಸ್ಥೆಗೆ ಮುನ್ನುಡಿ ಬರೆದಿದ್ದಾರೆ.
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲ ಅಧಿವೇಶನ ಆರಂಭವಾಗುವ ಮುನ್ನ ನಗರವನ್ನು ಪಾಲಿಕೆ ಸ್ವಚ್ಛಗೊಳಿಸಿತ್ತು. ಪ್ರಮುಖ ವೃತ್ತಗಳ ಗೋಡೆಗಳ ಮೇಲೆ ಬಣ್ಣ ಬಣ್ಣದ ಚಿತ್ರಗಳನ್ನು ಬಿಡಿಸಿ ಅಂದಗೊಳಿಸಲಾಗಿತ್ತು. ರಸ್ತೆವಿಭಜಕಗಳಿಗೆ ಬಣ್ಣ ಬಳಿದು, ಅಲಂಕಾರಿಕ ಸಸಿಗಳನ್ನು ನೆಡಲಾಗಿತ್ತು. ಪ್ರತಿ ಸಸಿಗೂ‌ ಬಳಸಿ ಬೀಸಾಕಿದ ಪ್ಲಾಸ್ಟಿಕ್ ಬಾಟಲಿಗಳನ್ನು ಕೊರೆಸಿ ಅಳವಡಿಸಿ, ಅವುಗಳ ಮೂಲಕ ನೀರು ಪೂರೈಸಲಾಗುತ್ತಿತ್ತು. ಆದರೆ, ಇದು ವರ್ಕೌಟ್ ಆಗಲಿಲ್ಲ. ಈಗ ಹೊಸ ಪ್ರಯೋಗಕ್ಕೆ ಮುಂದಾಗಿರುವ ಪಾಲಿಕೆ ಅಧಿಕಾರಿಗಳು ಹನಿ ನೀರಾವರಿ ಪದ್ಧತಿಗೆ ಮುಂದಾಗಿದ್ದಾರೆ.
ಸದ್ಯ ನಗರದ ಶ್ರೀಕೃಷ್ಣದೇವರಾಯ ವೃತ್ತದ ಬಳಿ ಪ್ರಾಯೋಗಿಕವಾಗಿ ಹನಿ ನೀರಾವರಿ ವ್ಯವಸ್ಥೆ ಕೈಗೊಳ್ಳಲಾಗಿದೆ. ರಸ್ತೆ ವಿಭಜಕದ ಮೇಲೆ ಒಂದು ಸಣ್ಣ ಕಬ್ಬಿಣದ ಟ್ಯಾಂಕ್ ಅಳವಡಿಸಲಾಗಿದೆ. ಅದಕ್ಕೆ ಪೈಪ್ ಜೋಡಿಸಿದ್ದು, ಒಂದೊಂದು ಸಸಿಗೆ ಒಂದೊಂದು ಪಾಯಿಂಟ್ ತೆರೆಯಲಾಗಿದೆ. ಹನಿ ಹನಿ ನೀರು ಬೀಳುವಂತೆ ಮಾಡಲಾಗಿದೆ. ನೀರು ಖಾಲಿ ಆದ ಮೇಲೆ ಸಿಬ್ಬಂದಿಗಳು ಟ್ರ್ಯಾಕ್ಟರ್ ಮೂಲಕ ಟ್ಯಾಂಕ್ ಗೆ ನೀರು ತುಂಬುತ್ತಿದ್ದಾರೆ.
ಅಶೋಕ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತ, ರಾಣಿ ಚನ್ನಮ್ಮ ವೃತ್ತ, ಅಂಬೇಡ್ಕರ್ ರಸ್ತೆ, ಶ್ರೀಕೃಷ್ಣದೇವರಾಯ ವೃತ್ತ, ಕೆಎಲ್ಇ ರಸ್ತೆವರೆಗೆ. ಅದೇ ರೀತಿ ಚನ್ನಮ್ಮ ವೃತ್ತದಿಂದ ಲಿಂಗರಾಜ ದೇಸಾಯಿ ಕಾಲೇಜು ರಸ್ತೆ, ಸಂಭಾಜಿ ಮಹಾರಾಜ ವೃತ್ತ, ಗೋಗಟೆ ವೃತ್ತ, ಕಾಂಗ್ರೆಸ್ ರಸ್ತೆ ಸೇರಿದಂತೆ ನಗರದ ಸುಮಾರು 6.5 ಕಿ.ಮೀ. ಪ್ರದೇಶದ ರಸ್ತೆ ವಿಭಜಕಗಳಲ್ಲಿ ಸಸಿಗಳನ್ನು ನೆಡಲಾಗಿತ್ತು.
ಪುಣೆ ಮತ್ತು ಕೊಲ್ಹಾಪುರದಿಂದ ತಂದಿದ್ದ ಬಬೂನ್ ವಿಲ್ಲಾ, ಜತ್ರಾಪ್, ಡಾಗ್ ಇಕ್ಸೋರಾ, ಕ್ರಿಸ್ಟೇನಾ, ಗೋಲ್ಡನ್ ಸೈಪ್ರಸ್, ಸೈಕಸ್ ಪಾಂಡಾ ತರಹದ 4500 ಅಲಂಕಾರಿಕ ಸಸಿಗಳನ್ನು ನೆಟ್ಟಿದ್ದರು. ಈಗ ಬಹುತೇಕ ಸಸಿಗಳು ಚಿಗುರೊಡೆದಿದ್ದು, ನಗರದ ಸೌಂದರ್ಯವನ್ನು ಹೆಚ್ಚಿಸುತ್ತಿವೆ. ಆರಂಭದಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ನೀರು ಪೂರೈಕೆಗೆ ಬಳಸಲಾಗಿತ್ತು. ಅದು ಅಷ್ಟೊಂದು ಪರಿಣಾಮಕಾರಿ ಆಗದ ಹಿನ್ನೆಲೆಯಲ್ಲಿ ಹೊಸ ಉಪಾಯ ಕಂಡುಕೊಂಡ ಪಾಲಿಕೆ ಅಧಿಕಾರಿಗಳು ಹನಿ ನೀರಾವರಿ ಮೊರೆ ಹೋಗಿದ್ದಾರೆ. ಪಾಲಿಕೆ ಆರ್ಥಿಕತೆಗೆ ತೊಂದರೆ ಆಗದಂತೆ‌‌ ಸಿಎಸ್ ಆರ್ ಅನುದಾನದಿಂದ ಪೈಪ್ ಅಳವಡಿಸುವ ಕೆಲಸ ಆಗುತ್ತಿದೆ.
ಮಹಾನಗರ ಪಾಲಿಕೆ ಆಯುಕ್ತೆ ಶುಭ.ಬಿ. ಅವರು ಮಾತನಾಡಿ, ಪಾಲಿಕೆಯವರು ಸಸಿಗಳನ್ನು ನೆಡುತ್ತಾರೆ. ಆದರೆ, ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದಿಲ್ಲ ಎಂಬ ಅಪವಾದವಿತ್ತು. ಹಾಗಾಗಿ, ಈ ಬಾರಿ ಅಧಿವೇಶನ ಸಂದರ್ಭದಲ್ಲಿ ಹೊಸದಾಗಿ ಸಸಿಗಳನ್ನು ನೆಟ್ಟಿದ್ದೇವು. ಈ ವೇಳೆ ನೀರುಣಿಸಲು ಪ್ರತಿ ಸಸಿಗೆ ಬಾಟಲಿ ಕಟ್ಟಿದ್ದೇವು. ಆಗ ಬಹಳಷ್ಟು ನೀರು ಪೋಲಾಗುತ್ತಿತ್ತು. ಅಲ್ಲದೇ ಸಿಬ್ಬಂದಿಗೆ ಬಹಳಷ್ಟು ಸಮಯ ಹಿಡಿಯುತ್ತಿತ್ತು. ಹಾಗಾಗಿ, ದಾನಿಗಳ ನೆರವಿನಿಂದ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದೇವೆ ಎಂದರು.
ಸ್ವಚ್ಛ ಸುಂದರ, ಹಸಿರು ಬೆಳಗಾವಿ ನಿರ್ಮಿಸಬೇಕು ಎಂಬ ಧ್ಯೇಯದೊಂದಿಗೆ ಈಗ 6.5 ಕಿ.ಮೀ. ಸಸಿಗಳನ್ನು ನೆಡಲಾಗಿದೆ. ಸಂಘ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ನಿಧಿ ಮೂಲಕ‌ ಹನಿ ನೀರಾವರಿ ಪೈಪ್ ಅಳವಡಿಸಿದ್ದೇವೆ. ಇದಕ್ಕೆ ಅಂತಾ ಪಾಲಿಕೆಯಿಂದ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಇನ್ನು ಬರುವ ದಿನಗಳಲ್ಲಿ ನಗರದ ಎಲ್ಲಾ ರಸ್ತೆ ವಿಭಜಕಗಳಲ್ಲಿ ತರಹೇವಾರಿ ಅಲಂಕಾರಿಕ ಸಸಿಗಳನ್ನು ನೆಟ್ಟು, ಕುಂದಾನಗರಿ ಬಣ್ಣ ಬಣ್ಣ ಹೂವುಗಳಿಂದ ಕಂಗೊಳಿಸುವಂತೆ ಮಾಡುತ್ತೇವೆ ಎಂದು ಶುಭ.ಬಿ‌. ವಿಶ್ವಾಸ ವ್ಯಕ್ತಪಡಿಸಿದರು.
ನಾಗರಿಕ ಸತೀಶ ಶೆಟ್ಟಿ ಎಂಬುವವರು ಮಾತನಾಡಿ, ಮಹಾನಗರ ಪಾಲಿಕೆಯಿಂದ ಇದೊಂದು ಉತ್ತಮ ಬೆಳವಣಿಗೆ. ಮೊದಲೆಲ್ಲಾ ಅಧಿವೇಶನ ಬಂದಾಗ ಸಸಿಗಳನ್ನು ನೆಟ್ಟು ಸುಮ್ಮನಾಗುತ್ತಿದ್ದರು. ಸರಿಯಾಗಿ ನಿರ್ವಹಣೆ ಆಗುತ್ತಿರಲಿಲ್ಲ. ಆದರೆ, ಈಗ ಹನಿ ನೀರಾವರಿ ಮೂಲಕ ನೀರೂಣಿಸುವ ಕಾರ್ಯ ಶ್ಲಾಘನೀಯ. ಅದೇ ರೀತಿ ಸಸಿಗಳ ಸುತ್ತಲೂ ಕಸ ಬೆಳೆಯದಂತೆ ನೋಡಿಕೊಳ್ಳಬೇಕು. ಸ್ವಚ್ಛ, ಸುಂದರ, ಹಸಿರು ಬೆಳಗಾವಿ ನಿರ್ಮಾಣಕ್ಕೆ ನಾವು ಕೂಡ ಪಾಲಿಕೆಗೆ ಕೈಜೋಡಿಸುತ್ತೇವೆ ಎಂದು ಭರವಸೆ ನೀಡಿದರು.
ನಗರದ ಬಸವೇಶ್ವರ ಉದ್ಯಾನ ಮತ್ತು ಬಾಬು ಜಗಜೀವನರಾಮ್ ಉದ್ಯಾನದಲ್ಲಿ‌ ಮಹಾನಗರ ಪಾಲಿಕೆಯಿಂದಲೇ ಸಸಿಗಳನ್ನು ಬೆಳೆಸುತ್ತಿದ್ದೇವೆ. ಇನ್ಮುಂದೆ ಬೇರೆ ಕಡೆಯಿಂದ ಸಸಿಗಳನ್ನು ತರುವುದಿಲ್ಲ. ನಾವು ಬೆಳೆಸಿದ ಸಸಿಗಳನ್ನು ಬಳಸಿಕೊಳ್ಳುತ್ತೇವೆ. ಸ್ವಚ್ಛ ಮತ್ತು ಹಸಿರು ಬೆಳಗಾವಿ ನಿರ್ಮಾಣಕ್ಕೆ ಸಾರ್ವಜನಿಕರು ಕೂಡ ನಮ್ಮ ಜೊತೆ ಕೈ ಜೋಡಿಸುವಂತೆ ಕೇಳಿಕೊಂಡರು.
ಹನುಮಂತ ಕಲಾದಗಿ,‌ ಪಾಲಿಕೆ ಪರಿಸರ ಅಭಿಯಂತ