ಬೆಳಗಾವಿ : ಮತ್ತೊಂದು ರಾಜ್ಯೋತ್ಸವ ಬಂದಿದೆ. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಇಡೀ ಕರ್ನಾಟಕದಲ್ಲಿ ಈಗ ರಾಜ್ಯೋತ್ಸವದ ಸಂಭ್ರಮ ಕಳೆಗಟ್ಟಿದೆ.ಅನ್ಯ ಭಾಷೆಗಳಲ್ಲಿ ಕಳೆದು ಹೋಗದೇ ಕನ್ನಡ ಅಜರಾಮರವಾಗಿರಲಿ. ಮನೆಭಾಷೆಯಾಗದೇ ವ್ಯವಹಾರಿಕೆ ಭಾಷೆಯಾಗಿ ಎಲ್ಲಡೆ ಪಸರಿಸಲಿ. ಭಾಷೆ ಭಾವನೆಗಳನ್ನು ಅಭಿವ್ಯಕ್ತಪಡಿಸುವದರಿಂದ ಯಾವುದೇ ಭಾಷೆ ಕಲಿತರು ಕೂಡ ನನ್ನ ತಾಯಿನುಡಿ ಮೊದಲ ಆದ್ಯತೆಯಾಗಬೇಕು. ಪರಭಾಷಿಕರಿಗೂ ಕನ್ನಡ ಕಲಿಸಿದಾಗ ಮಾತ್ರ ನಮಗೆ ಉಳಿಗಾಲ.

ದೇಶದಲ್ಲಿ ಕೇವಲ 4.5 ಕೋಟಿ ಜನರು ಮಾತ್ರ ಕನ್ನಡ ಮಾತನಾಡುತ್ತಾರೆ. ಇಂಗ್ಲೀಷಮಯವಾಗಿರುವ ಅಮೇರಿಕೆಯಲ್ಲಿಯೂ ಕೂಡ 48 ಸಾವಿರ ಜನರು ನಮ್ಮ ತಾಯನುಡಿ ಮಾತನಾಡುತ್ತಾರೆ.ಅದರಂತೆ ನಾಉ ಎಲ್ಲೇ ಇದ್ದರೂ ಕೂಡ ಕನ್ನಡಕ್ಕೆ ಮೊದಲ ಆದ್ಯತೆ ನೀಡಿ, ಅಲ್ಲಿನವರಿಗೂ ಕನ್ನಡ ಕಲಿಸುವ ಕಾರ್ಯ ನಡೆಯಬೇಕು. ಕೇವಲ ಬರವಣಿಗೆಯಿಂದ ಮಾತ್ರ ಕನ್ನಡ ಉಳಿಯುದಿಲ್ಲ. ಅದನ್ನು ಅರ್ಥಮಾಡಿಕೊಂಡು ನಡೆಯಬೇಕು.
ಕನ್ನಡ ನಾಡಿಗೆ ಪುರಾತನ ಇತಿಹಾಸವಿದ್ದು, 2,000ಕ್ಕೂ ಅಧಿಕ ವರ್ಷಗಳ ಗತ ಇತಿಹಾಸವನ್ನು ಹೊಂದಿದೆ. ಭಾರತದಲ್ಲಿ ಅತ್ಯಂತ ಶ್ರೇಷ್ಠ ರಾಜಮನೆತನಗಳು ಅಳಿ ಹೋಗಿದ್ದು ಅವುಗಳಲ್ಲಿ ಅನೇಕ ಕನ್ನಡ ರಾಜಮನೆತನಗಳು ಸಾಮ್ರಾಜ್ಯ ಕಟ್ಟಿ ಇಡೀ ಭಾರತವನ್ನೇ ಆಳಿವೆ. ವಿಜಯನಗರ ಸಾಮ್ರಾಜ್ಯ, ಬಾದಾಮಿಯ ಚಾಲುಕ್ಯರು ಕನ್ನಡ ನಾಡಿನ ವಿಸ್ತಾರವನ್ನು ದೇಶದ ಉದ್ದಕ್ಕೂ ವಿಸ್ತರಿಸಿದ್ದಾರೆ.
ಕನ್ನಡ ಸಾಹಿತ್ಯ ಪರಂಪರೆ ಭಾರತದಲ್ಲೆ ಅತ್ಯಂತ ವಿಶಿಷ್ಟ ಭಾಷಾ ಪ್ರಕಾರವಾಗಿ ಗುರುತಿಸಿಕೊಂಡಿದೆ. ವಚನ, ದಾಸ ಸಾಹಿತ್ಯ ಮುಂತಾದ ಪ್ರಕಾರಗಳಿಂದ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಹಾಗೂ ಬಲಯುತವಾಗಿ ಕನ್ನಡದ ಶ್ರೇಷ್ಠತೆಯನ್ನು ಪ್ರತಿಪಾದಿಸಲು ನೆರವಾಗಿರುವುದನ್ನು ಕಾಣಬಹುದು. ಕನ್ನಡದ ರಾಜಮನೆತನಗಳು ತಮ್ಮ ಆಸ್ಥಾನದಲ್ಲಿ ಕನ್ನಡ ಭಾಷೆಯ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಕವಿ ಪುಂಗವರಿಗೆ ರಾಜಶ್ರಯ ನೀಡಿ ಪ್ರೋತ್ಸಾಹಿಸಿ ಕನ್ನಡ ಭಾಷೆಯನ್ನು ಉತ್ತುಂಗಕ್ಕೇರಿಸುವಂತೆ ಮಾಡಿದ್ದರು ಎಂಬ ಇತಿಹಾಸ ಸಿಗುತ್ತದೆ.
ಬ್ರಿಟಿಷರ ಕಾಲದಲ್ಲಿ ಕನ್ನಡ ನಾಡು ಹರಿದು ಹಂಚಿ ಹೋಗಿದ್ದರೂ ಕೆಲವು ಕಡೆ ಕನ್ನಡಕ್ಕೆ ಪ್ರೋತ್ಸಾಹ ಸಿಕ್ಕಿತು. ಆದರೆ, ಮುಂಬೈ ಕರ್ನಾಟಕ ಎಂದು ಕರೆದುಕೊಳ್ಳುವ ಬೆಳಗಾವಿ, ಧಾರವಾಡ ವಿಜಯಪುರ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮರಾಠಿ ಭಾಷೆಯ ಪ್ರಭಾವ ಹೆಚ್ಚಾಯಿತು. ಇದರ ಪರಿಣಾಮ ಇಂದಿಗೂ ಗಮನಿಸಬಹುದಾಗಿದೆ. ಅದರಂತೆ ಮಂತ್ರಾಲಯ, ಅದೋನಿ, ಅನಂತಪುರ ಮುಂತಾದ ಪ್ರದೇಶಗಳಲ್ಲಿ ತೆಲುಗು ಪ್ರಾಬಲ್ಯ ಹೊಂದಿ ಅಚ್ಚಗನ್ನಡ ಪ್ರದೇಶಗಳು ತೆಲುಗು ರಾಜ್ಯಗಳ ಪಾಲಾಗಿದೆ. ದಕ್ಷಿಣದಲ್ಲಿ ಹೊಸೂರು, ನೀಲಗಿರಿ, ಕೃಷ್ಣಗಿರಿ ಮುಂತಾದ ಕನ್ನಡ ಪ್ರದೇಶಗಳಲ್ಲಿ ಇಂದು ತಮಿಳು ಭಾಷೆ ಸಮೃದ್ಧಿ ಪಡೆದುಕೊಂಡು ತಮಿಳು ಪ್ರದೇಶವಾಗಿ ಮಾರ್ಪಟ್ಟಿದೆ.
ಕರಾವಳಿಯಲ್ಲಿ ಅಪ್ಪಟ ಕನ್ನಡ ಸಂಸ್ಕೃತಿಯ ಹಿನ್ನೆಲೆ ಹೊಂದಿರುವ ಕಾಸರಗೋಡು ಕೇರಳದ ಕುತಂತ್ರದಿಂದ ಆ ರಾಜ್ಯದ ಪಾಲಾಯಿತು. ನಿರಂತರ ನಿರಶನ ಹಾಗೂ ಮುಷ್ಕರಗಳಿಂದ ಕಾಸರಗೋಡು ಕನ್ನಡಿಗರು ಬೇಸತ್ತಿದ್ದಾರೆ ಅವರು ತಮ್ಮ ನಾಡು ಯಾವಾಗ ಕರ್ನಾಟಕಕ್ಕೆ ಸೇರ್ಪಡೆಯಾಗಬಹುದು ಎಂದು ಈಗಲೂ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಕರ್ನಾಟಕ ಏಕೀಕರಣಗೊಂಡು ಆರು ದಶಕಗಳು ಸಂದಿವೆ. ಆದರೆ, ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪಾಲಿಗೆ ಮಹಾರಾಷ್ಟ್ರ ಅತ್ಯಂತ ತಂಟೆಕೋರ ರಾಜ್ಯ ಎಂದು ಗುರುತಿಸಿಕೊಂಡಿದೆ. ಮರಾಠಿ ಭಾಷಿಕರು ಕನ್ನಡಿಗರ ಜೊತೆ ಹೊಂದಿಕೊಂಡು ಬಾಳುತ್ತಿದ್ದರೂ ಭಾಷಾ ವಿವಾದ ಹಿನ್ನೆಲೆಯಲ್ಲಿ ಬೆಳಗಾವಿ ಗಡಿತಂಟೆಯನ್ನು ಇನ್ನು ಆರಾಧ್ಯ ಜೀವಂತವಾಗಿ ಇಟ್ಟುಕೊಳ್ಳುವ ಮೂಲಕ ವಿವಾದಕ್ಕೆ ಆಗಾಗ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ.
ಒಂದೂವರೆ ದಶಕಗಳಿಂದ ಬೆಳಗಾವಿಯಲ್ಲಿ ಕನ್ನಡ ಕಟ್ಟುವ ಕೆಲಸ ಅತ್ಯಂತ ವೇಗವಾಗಿ ಸಾಗಿದೆ. ಬೆಳಗಾವಿಯಲ್ಲಿ ವಿಧಾನಸೌಧ ನಿರ್ಮಾಣವಾಗಿದ್ದು ಎರಡನೇ ರಾಜಧಾನಿ ಪಟ್ಟ ಪಡೆದುಕೊಂಡಿದೆ. ಆದರೂ ಬೆಳಗಾವಿ ಮಹಾನಗರಕ್ಕೆ ಬೇಕಾಗಿರುವ ಮೂಲಭೂತ ಸೌಲಭ್ಯಗಳು ಹಾಗೂ ಇನ್ನೂ ಹಲವು ಅಭಿವೃದ್ಧಿ ಕೆಲಸಗಳಿಗೆ ಕರ್ನಾಟಕ ಸರಕಾರ ಹೆಚ್ಚಿನ ಗಮನ ಹರಿಸಬೇಕಾಗಿದೆ. ಅಂದಾಗ ಮಾತ್ರ ಗಡಿಯಲ್ಲಿ ಕನ್ನಡದ ಕೋಟೆ ಇನ್ನೂ ಇನ್ನಷ್ಟು ಬಲವಾಗಲು ಸಾಧ್ಯವಿದೆ ಎನ್ನುವುದು ಕನ್ನಡಿಗರ ಆಶಯವಾಗಿದೆ.