ಬೆಳಗಾವಿ : ಬೆಳಗಾವಿ ಸಾರ್ವಜನಿಕ ಗಣೇಶೋತ್ಸವದ ಮೆರವಣಿಗೆ ಈ ವರ್ಷ ದಾಖಲೆ ಬರೆದಿದೆ. ಮಂಗಳವಾರ ಸಂಜೆ 4 ಕ್ಕೆ ಆರಂಭವಾದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಬುಧವಾರ ರಾತ್ರಿ 12 ರವರೆಗೂ ಮುಂದುವರಿಯಿತು.
ನಿರಂತರ 32 ಗಂಟೆಗಳ ಕಾಲ ಮೆರವಣಿಗೆ ನಡೆದಿರುವುದು ಬೆಳಗಾವಿ ಇತಿಹಾಸದಲ್ಲಿ ಇದೇ ಮೊದಲು. ಈ ಸಲ ಒಟ್ಟು 386 ಸಾರ್ವಜನಿಕ ಗಣಪತಿಗಳ ವಿಸರ್ಜನೆ ಅತ್ಯಂತ ಸಾಂಗವಾಗಿ ನೆರವೇರಿತು.
ವಿಸರ್ಜನಾ ತಾಣವಾಗಿರುವ ಬೆಳಗಾವಿಯ ಕಪಿಲೇಶ್ವರ ಬಳಿ ಭಾರಿ ಸಂಖ್ಯೆಯಲ್ಲಿ ಜನ ಗಣಪತಿ ವೈಭವಕ್ಕೆ ಸಾಕ್ಷಿಯಾದರು. ವಿಸರ್ಜನೆಗೆ ಸಾಲಾಗಿ ನಿಂತಿದ್ದ ಗಣಪತಿಗಳ ದೃಶ್ಯ ಎಲ್ಲರ ಗಮನ ಸೆಳೆಯಿತು.
ಗಣಪತಿ ಮಂಡಳಗಳ ಪದಾಧಿಕಾರಿಗಳು ಗಂಟೆಗಟ್ಟಲೆ ಕುಣಿದು ಕುಪ್ಪಳಿಸಿದರು. ಒಂದಕ್ಕೊಂದು ಸುಂದರ ಎನ್ನುವಂತೆ ಕಂಡುಬಂದಿದ್ದ ಸಾಲಾಗಿ ಮೆರವಣಿಗೆಯಲ್ಲಿ ಸಾಗುತ್ತಿದ್ದ ಗಣಪತಿಗಳು ಎಲ್ಲರ ಮನ ಸುರಿಗೊಂಡವು. ಕಿಲೋ ಮೀಟರ್ ಗಟ್ಟಲೆ ಸರದಿ ಸಾಲಲ್ಲಿ ಗಣಪತಿಗಳು ಹೋಗುತ್ತಿರುವ ದೃಶ್ಯ ನಯನ ಮನೋಹರವಾಗಿತ್ತು. ಗಣಪತಿ ಮಂಡಲಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಎರಡು ದಿನಗಳ ಕಾಲ ಮೆರವಣಿಗೆಯಲ್ಲಿ ಪಾಲ್ಗೊಂಡರು. ಬೆಳಗಾವಿ ಪೊಲೀಸರಲ್ಲದೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ಪೊಲೀಸರು ಭದ್ರತಾ ಕಾರ್ಯವನ್ನು ಅತ್ಯಂತ ಅಚ್ಚುಕಟ್ಟಿನಿಂದ ನಿಭಾಯಿಸಿದರು. ಒಟ್ಟಾರೆ ನಿರಂತರ 32 ಗಂಟೆಗಳ ಕಾಲ ನಡೆದ ಬೆಳಗಾವಿಯ ಸಾರ್ವಜನಿಕ ಗಣಪತಿಗಳ ಮೆರವಣಿಗೆ ಈ ಬಾರಿ ಹೊಸ ಇತಿಹಾಸವನ್ನು ಬರೆಯುವಲ್ಲಿ ಯಶಸ್ವಿಯಾಯಿತು.