ಬೆಳಗಾವಿ : ಅತ್ಯಂತ ಮಹತ್ವಾಕಾಂಕ್ಷಿಯಾಗಿರುವ ಪುಣೆ-ಬೆಳಗಾವಿ-ಹುಬ್ಬಳ್ಳಿ ನಡುವೆ ಸಂಚರಿಸುವ ವಂದೇ ಭಾರತ ರೈಲು ಸೆಪ್ಟೆಂಬರ್ 16ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ ಎಂದು ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು ತಿಳಿಸಿದ್ದಾರೆ.
ಈ ರೈಲು ಸದ್ಯಕ್ಕೆ ವಾರದಲ್ಲಿ ಮೂರು ದಿನ ಸಂಚಾರ ನಡೆಸಲಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಗಮನಿಸಿ ವಾರವಿಡೀ ಸಂಚಾರ ನಡೆಸುವ ಸಾಧ್ಯತೆ ಇದೆ. ಜೊತೆಗೆ ಸದ್ಯಕ್ಕೆ ಈ ರೈಲು ಕೊಲ್ಲಾಪುರಕ್ಕೆ ಹೋಗುವುದಿಲ್ಲ. ಆದರೆ, ಈ ಮೊದಲು ಕೊಲ್ಲಾಪುರಕ್ಕೆ ಹೋಗುವ ಬಗ್ಗೆ ವೇಳಾಪಟ್ಟಿ ತಯಾರಿಸಲಾಗಿತ್ತು. ಜೊತೆಗೆ ವಾರದಲ್ಲಿ ಆರು ದಿನ ಸಂಚರಿಸುವ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿತ್ತು. ಸದ್ಯಕ್ಕೆ ಇದನ್ನು ಕೇವಲ ಮೂರು ದಿನಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ.
ನೇರ ಕಾರ್ಯಾಚರಣೆ ಪುಣೆಯಿಂದ ಹುಬ್ಬಳ್ಳಿಗೆ 8:30 ಗಂಟೆ ಬೇಕಾಗುತ್ತದೆ. ಆದರೆ ಕೊಲ್ಲಾಪುರಕ್ಕೆ ಇದನ್ನು ಕಾರ್ಯಾಚರಣೆಗೊಳಿಸಿದರೆ ಎರಡೂವರೆ ಗಂಟೆ ಹೆಚ್ಚುವರಿ ಸಮಯ ಬೇಕಾಗುತ್ತದೆ. ಪುಣೆ- ಹುಬ್ಬಳ್ಳಿ ನಡುವೆ ಒಟ್ಟು ಅಂತರ 558 ಕಿಲೋಮೀಟರ್. ಆದರೆ ಇದು ಕೊಲ್ಲಾಪುರ ಮಾರ್ಗವಾಗಿ ಸಂಚರಿಸಿದರೆ 654 ಕಿಲೋಮೀಟರ್ ಆಗುತ್ತದೆ. ಇದರಿಂದಾಗಿ ಸದ್ಯಕ್ಕೆ ಈ ಮಾರ್ಗವನ್ನು ಕೈ ಬಿಡಲಾಗಿದೆ. ಸದ್ಯದ ವೇಳಾಪಟ್ಟಿಯಂತೆ ಬುಧವಾರ ಶುಕ್ರವಾರ ಹಾಗೂ ರವಿವಾರ ಹುಬ್ಬಳ್ಳಿಯಿಂದ ವಂದೇ ಭಾರತ ರೈಲು ಕಾರ್ಯಾಚರಣೆ ಮಾಡಲಿದೆ. ಹುಬ್ಬಳ್ಳಿಯಿಂದ ಬೆಳಗ್ಗೆ 5 ಗಂಟೆಗೆ ಹೊರಡುವ ರೈಲು ಪುಣೆಗೆ ಮಧ್ಯಾಹ್ನ 1:30 ಗಂಟೆಗೆ ತಲುಪಲಿದೆ. ಗುರುವಾರ, ಶನಿವಾರ ಮತ್ತು ಸೋಮವಾರ ಮಧ್ಯಾಹ್ನ 2:15 ಕ್ಕೆ ಪುಣೆಯಿಂದ ಹೊರಡುವ ರೈಲು ಹುಬ್ಬಳ್ಳಿಗೆ ರಾತ್ರಿ 10:45 ಗಂಟೆಗೆ ತಲುಪಲಿದೆ.
ಪುಣೆ – ಬೆಳಗಾವಿ- ಹುಬ್ಬಳ್ಳಿ ಆರಂಭವಾಗಿರುವ ದೇಶದ ಅತ್ಯಂತ ವೇಗದ ವಂದೇ ಭಾರತ ರೈಲು ಬಹುಕಾಲದ ಕನಸು. ಕೊನೆಗೂ ಕೇಂದ್ರ ಸರಕಾರ ಈ ಭಾಗದ ಜನತೆಯ ಒತ್ತಾಸೆ ಮೇರೆಗೆ ವೇಗದ ರೈಲನ್ನು ಆರಂಭಿಸುತ್ತಿದೆ. ಬರುವ ದಿನಗಳಲ್ಲಿ ಈ ರೈಲನ್ನು ಪ್ರತಿದಿನವೂ ಓಡಿಸುವಂತಾಗಬೇಕು ಎನ್ನುವುದು ಈ ಭಾಗದ ಜನರ ಬೇಡಿಕೆಯಾಗಿದೆ.
ಪುಣೆ-ಬೆಳಗಾವಿ ವಂದೇ ಭಾರತ ವಾರದಲ್ಲಿ ಮೂರು ದಿನ ಸಂಚಾರ
