ಬೆಳಗಾವಿ: ರಾಜ್ಯದ ಅತಿ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಗೆ ವಿಶಾಲ ಹಾಗೂ ಅತ್ಯಾಧುನಿಕ ವ್ಯವಸ್ಥೆಯುಳ್ಳ ಜಿಲ್ಲಾಧಿಕಾರಿ ಕಚೇರಿ ಬೇಕು ಎಂಬ ಬೇಡಿಕೆ ಕೊನೆಗೂ ಈಡೇರುವ ಹಂತಕ್ಕೆ ಬಂದು ತಲುಪಿದೆ. ಇದರಿಂದಾಗಿ ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾಗಿರುವ ಈಗಿನ ಜಿಲ್ಲಾಧಿಕಾರಿ ಕಚೇರಿ ಕೊನೆಗೂ ಇತಿಹಾಸದ ಪುಟ ಸೇರುವ ಸಾಧ್ಯತೆ ಸನಿಹದಲ್ಲಿದ್ದು, ಹೊಸ ಕಟ್ಟಡ ಮುಂಬರುವ ವರ್ಷಗಳಲ್ಲಿ ಮೇಲೆಳಲಿದೆ.
ಅಂದಾಜು 200 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ನಿರ್ಮಾಣವಾಗಬೇಕಾಗಿದ್ದರೂ ಸದ್ಯ ಆರಂಭಿಕ ಹಂತದಲ್ಲಿ 100 ಕೋಟಿ ಬಿಡುಗಡೆಯಾಗಲಿದೆ. ಈ ಮೂಲಕ ಶೀಘ್ರವೇ ಏಕೀಕೃತ ಕಟ್ಟಡದಲ್ಲಿ ಜಿಲ್ಲಾಧಿಕಾರಿ ಕಚೇರಿ ತಲೆ ಎತ್ತಲಿದ್ದು ಬೆಳಗಾವಿ ಮಹಾನಗರದ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಈ ನೂತನ ಕಟ್ಟಡ ಹೊಸ ಭಾಷ್ಯ ಬರೆಯಲಿದೆ.
ಈಗಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಐಎಎಸ್ ಅಧಿಕಾರಿಗಳು ಜಿಲ್ಲೆಯ ಆಡಳಿತವನ್ನು ನಿಭಾಯಿಸಿದ್ದರು. ಎಲ್ಲಾ ಅಧಿಕಾರಿಗಳ ಪಾಲಿಗೆ ಈಗ ಇರುವ ಜಿಲ್ಲಾಧಿಕಾರಿ ಕಚೇರಿ ಅತ್ಯಂತ ಮೆಚ್ಚಿನ ಕಚೇರಿಯಾಗಿ ಮನೆಗೆದ್ದಿತ್ತು. ಜಿಲ್ಲೆಯ ಪ್ರತಿಯೊಂದು ಪ್ರಮುಖ ನಿರ್ಧಾರಗಳು ಈ ಕಚೇರಿ ಮೂಲಕ ತೆಗೆದುಕೊಳ್ಳಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಈ ಕಟ್ಟಡ ನಾಮಾವಶೇಷವಾಗುವ ಮೂಲಕ ಈ ಹಳೆಯ ಕಟ್ಟಡ ಇತಿಹಾಸದ ಪುಟ ಸೇರಲಿದೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆರು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ 100 ಕೋಟಿ ರೂ.ಅನುಮೋದನೆ ಸಿಕ್ಕಿದ್ದು,ಈ ಯೋಜನೆಗಾಗಿ ಲೋಕೋಪಯೋಗಿ ಇಲಾಖೆಯಿಂದ 200 ಕೋಟಿಯ ಕ್ರಿಯಾ ಯೋಜನೆ ಸಲ್ಲಿಸಲಾಗಿತ್ತು. ಈ ಯೋಜನೆಯನ್ನು ಈಗ ಅನುಮೋದಿಸಲಾಗಿದೆ. ಮೊದಲ ಹಂತದಲ್ಲಿ ಸದ್ಯಕ್ಕೆ 100 ಕೋಟಿ ರೂ. ಮಂಜೂರಾಗಿದೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆರು ಅಂತಸ್ತಿನ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸ್ಥಳ ಪರಿಶೀಲನೆ, ಸಮೀಕ್ಷೆ, ಕಟ್ಟಡ ನಿರ್ಮಾಣ ನಕ್ಷೆಯನ್ನು ತಾಂತ್ರಿಕ ತಂಡದಿಂದ ಅನುಮೋದನೆಗೆ ಕಳುಹಿಸಲಾಗಿತ್ತು. ಈ ಬಗ್ಗೆ ಜಿಲ್ಲಾಡಳಿತ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಕಳುಹಿಸಿತ್ತು. ಕಟ್ಟಡ ನಿರ್ಮಾಣ ಇಲಾಖೆ ಅನುಮೋದನೆ ನೀಡಿದೆ. ಮೊದಲ ಹಂತದಲ್ಲಿ ಇನ್ನೂರು ಕೋಟಿಯಲ್ಲಿ ನೂರು
ಕೋಟಿ ನಿಧಿ ಮಂಜೂರಾಗಿದೆ.
ಜಿಲ್ಲಾಧಿಕಾರಿ ಕಚೇರಿ ಜತೆಗೆ ವಿವಿಧ ಇಲಾಖೆಗಳ ಕಚೇರಿಗಳು ಇಲ್ಲಿ ಇರುತ್ತವೆ. ಕಚೇರಿ ಕಟ್ಟಡಗಳು ಹಳೆಯದಾಗಿದೆ. ಅದನ್ನು ಕೆಡವಿ ಹೊಸ ಕಚೇರಿ ನಿರ್ಮಿಸಲಾಗುವುದು. ಆರು ಅಂತಸ್ತಿನ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಇರಲಿದೆ. ಆರಂಭದಲ್ಲಿ 34 ಕಚೇರಿಗಳನ್ನು ಇಲ್ಲಿಗೆ ಸ್ಥಳಾಂತರಿಸುವ ಯೋಜನೆ ಇತ್ತು. ಆದರೆ, ಈಗ 29 ಕಚೇರಿಗಳನ್ನು ಸ್ಥಳಾಂತರಿಸುವ ಯೋಜನೆ ಇದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದೆ. ಮಣ್ಣಿನ ಪರೀಕ್ಷೆ ಸಹಾ ಮಾಡಲಾಗಿದೆ.ಇಲ್ಲಿನ ಭೂಮಿ ಕಟ್ಟಡಕ್ಕೆ ಸೂಕ್ತವಾಗಿದೆ. ಕಟ್ಟಡದ ಸುತ್ತಲೂ ರಸ್ತೆ ಇರುತ್ತದೆ. ಪ್ರವೇಶ ರಸ್ತೆಯಲ್ಲಿ ಉದ್ಯಾನವನ, ಪಾರ್ಕಿಂಗ್ ಸ್ಥಳ, ನೆಲ ಮಹಡಿಯಲ್ಲಿ ವಿವಿಧ ರೀತಿಯ ಬ್ಲಾಕ್‌ಗಳನ್ನು ರಚಿಸಲಾಗುವುದು.
ಜಿಲ್ಲಾಧಿಕಾರಿಗಳ ಹಳೆಯ ಕಟ್ಟಡಗಳನ್ನು ಕೆಡವಲಾಗುವುದು.
ಹೊಸ ಆರು ಅಂತಸ್ತಿನ ಕಟ್ಟಡಕ್ಕೆ ದಾರಿ ಮಾಡಿಕೊಡಲು ಹಳೆಯ ಕಟ್ಟಡಗಳನ್ನು ಕೆಡವಲಾಗುತ್ತದೆ. ಇದು ಜಿಲ್ಲಾಧಿಕಾರಿ ಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು, ಚುನಾವಣಾ ಇಲಾಖೆ, ಲೋಕಾಯುಕ್ತ, ಉಪ ನೋಂದಣಾಧಿಕಾರಿ, ತಾಲೂಕು ಪಂಚಾಯತ್, ಜಿಲ್ಲಾ ಮುಖ್ಯ ಗ್ರಂಥಾಲಯ ಮತ್ತು ಇತರ ಕಚೇರಿಗಳನ್ನು ಒಳಗೊಂಡಿದೆ.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೊಸ ಕಟ್ಟಡ ನಿರ್ಮಿಸುವ ಪ್ರಸ್ತಾವನೆ ಹಲವು ದಿನಗಳಿಂದ ಚರ್ಚೆಯಲ್ಲಿದೆ. ಆದರೆ, ವೇಗವನ್ನು ಪಡೆಯುತ್ತಿರಲಿಲ್ಲ.
ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು ಅಧಿಕಾರ ಸ್ವೀಕರಿಸಿದ ಬಳಿಕ ಈ ಕಾರ್ಯಕ್ಕೆ ಆಸಕ್ತಿ ತೋರಿದರು. ಕಾಮಗಾರಿಗೆ ವೇಗ ನೀಡಲಾಗಿದ್ದು, ಮುಂದಿನ ವರ್ಷ ಅಂದರೆ 2025 ರ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಹೀಗಾಗಿ ಈ ಕಾಮಗಾರಿಗೆ ಶೀಘ್ರವೇ ಟೆಂಡರ್‌ ಕರೆಯಲಾಗುವುದು. ಒಟ್ಟಾರೆಯಾಗಿ ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಜಿಲ್ಲಾಧಿಕಾರಿ ಕಚೇರಿಗೆ ಕೊನೆಗೂ ಹೊಸ ಕಟ್ಟಡ ಯೋಗ ಭಾಗ್ಯ ಕೂಡಿ ಬರುವ ದಿನಗಳು ದೂರವಿಲ್ಲ.