ಬೆಳಗಾವಿ : ಮಿರಜ್-ಬೆಂಗಳೂರು ರೇಲ್ವೆ ಮಾರ್ಗ ದ್ವೀಪಥ ಹಾಗೂ ವಿದ್ಯುದ್ದೀಕರಣ ಪೂರ್ಣಗೊಂಡಿದ್ದು, ಇಂದು ಕುಡಚಿ – ಮೀರಜ್ ನಡುವೆ ಎಲೆಕ್ಟ್ರಿಕ್ ಲೋಕೋ ಇಂಜಿನ್ ರೈಲಿನೊಂದಿಗೆ ಸಿಆರ್ ಎಸ್ ತಪಾಸಣೆಯನ್ನು ಯಶಸ್ವಿಯಾಗಿ ನಡೆಸಲಾಯಿತು.
ರೈಲ್ವೆ ಸುರಕ್ಷತಾ ಆಯುಕ್ತರು (CRS) ಇಂದು ವಿದ್ಯುದೀಕರಣಗೊಂಡ ನೂತನ ಮಾರ್ಗವನ್ನು ಪರಿಶೀಲಿಸಿ, ಪೂರ್ಣ ಪ್ರಮಾಣದ ವಿದ್ಯುತ್ ರೈಲು ಕಾರ್ಯಾಚರಣೆಯನ್ನು ಪ್ರಾರಂಭಿಸಲು ಒಪ್ಪಿಗೆ ಸೂಚಿಸಿದ್ದಾರೆ. ಮೀರಜ್ನಿಂದ ಬೆಂಗಳೂರು ರೈಲು ಮಾರ್ಗವು ಕೆಲವೇ ದಿನಗಳಲ್ಲಿ ಪೂರ್ಣವಾಗಿ ಕಾರ್ಯನಿರ್ವಹಿಸಲು ಸಿದ್ಧವಾಗಿದೆ.
ಜೊತೆಗೆ ಮೀರಜ್ ಮತ್ತು ಪುಣೆ ನಡುವಿನ ವಿದ್ಯುದ್ದೀಕರಣ ಕಾಮಗಾರಿಯೂ ಪೂರ್ಣಗೊಂಡಿದ್ದು, ಈ ಪ್ರದೇಶದಲ್ಲಿ ರೈಲ್ವೆ ಜಾಲವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಲಪಡಿಸುತ್ತ ಪರಿಸರ ಸ್ನೇಹಿ ರೈಲು ಸೇವೆಗಳಿಗೆ ದಾರಿ ತೆರೆದಿಡುತ್ತದೆ.
ಮೀರಜ್-ಬೆಂಗಳೂರು ವಿಭಾಗದ ಯಶಸ್ವಿ ವಿದ್ಯುದ್ದೀಕರಣದೊಂದಿಗೆ, ರೈಲ್ವೆ ಅಧಿಕಾರಿಗಳು ಈಗ ಈ ಮಾರ್ಗದಲ್ಲಿ ಹೊಸ ಹೈಸ್ಪೀಡ್ ರೈಲುಗಳನ್ನು ಪರಿಚಯಿಸುವತ್ತ ಗಮನಹರಿಸಿದ್ದಾರೆ. ಪುಣೆ-ಬೆಳಗಾವಿ ವಂದೇ ಭಾರತ್ ಎಕ್ಸ್ಪ್ರೆಸ್, ಶೀಘ್ರದಲ್ಲೇ ಕಾರ್ಯಾಚರಣೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಪುಣೆ ಮತ್ತು ಬೆಳಗಾವಿ ನಡುವಿನ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವ ವಂದೇ ಭಾರತ ಎಕ್ಸಪ್ರೆಸ್ ಪ್ರಯಾಣಿಕರಿಗೆ ಆರಾಮದಾಯಕ ಮತ್ತು ಶೀಘ್ರ ತಲುಪುವದರಿಂದ ಸಮಯ ಉಳಿತಾಯವಾಗಲಿದೆ. ರೈಲು ಪ್ರಯಾಣಿಕರು ಮತ್ತು ಉದ್ಯಮಿಗಳು ವಂದೇ ಭಾರತ ರೈಲಿಗೆ ಕಾತರಿಸುತ್ತಿದ್ದಾರೆ.