ಬೆಳಗಾವಿ,: ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸಲು ಅವಶ್ಯವಿರುವ ‘ಡಿಮಾಂಡ್ ಸರ್ವೆ’ ಕೈಗೊಳ್ಳುವಂತೆ ಸಂಸದ ಜಗದೀಶ್ ಶೆಟ್ಟರ್ ಅವರು ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಹಾಗೂ ಏರ್ಪೋರ್ಟ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಬೆಳಗಾವಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ರಾಜ್ಯದ ಎರಡನೇ ರಾಜಧಾನಿ. ಬೆಳಗಾವಿಯು ವಿಮಾನ ಸೇವೆಯಲ್ಲಿ ರಾಜ್ಯದಲ್ಲಿ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳ ನಂತರ ಮೂರನೆಯ ಅತಿ ದೊಡ್ಡ ನಿಲ್ದಾಣವಾಗಿದೆ. ಬೆಳಗಾವಿಯಿಂದ ದಿನನಿತ್ಯ 10 ವಿಮಾನಗಳು ದೇಶದ ವಿವಿಧ ನಗರಗಳಿಗೆ ಸಂಪರ್ಕ ಕಲ್ಪಿಸುತ್ತಿವೆ. ನೆರೆಯ ಕೊಲ್ಲಾಪುರ ಹಾಗೂ ಬಾಗಲಕೋಟೆ, ವಿಜಯಪುರ, ಧಾರವಾಡ ಜಿಲ್ಲೆಯಿಂದಲೂ ಸಹ ಪ್ರಯಾಣಿಕರು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ವಿವಿಧ ನಗರಗಳಿಗೆ ಪ್ರವಾಸ ಮಾಡುತ್ತಿದ್ದಾರೆ. ಆದ್ದರಿಂದ ಮೇಲ್ದರ್ಜಗೇರಿಸುವದು  ಅತ್ಯವಶ್ಯವಾಗಿದೆ ಎಂದರು.

ಬೆಳಗಾವಿ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೆ ಏರಿಸಲು ಎಲ್ಲ ಅರ್ಹತೆ ಹೊಂದಿದೆ. ಈ ಕುರಿತು ಪ್ರಾರಂಭದಲ್ಲಿ ಅಗತ್ಯವೆನಿಸಿರುವ ‘ಡಿಮಾಂಡ್ ಸರ್ವೆ’ ಕೈಗೊಳ್ಳುವ ಬಗ್ಗೆ ಬೆಳಗಾವಿ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರು ಮುಂದಿನ ಕ್ರಮವನ್ನು ಜರುಗಿಸಲು ಸಭೆಯಲ್ಲಿ ಸೂಚಿಸಿದರು.

ಸಭೆಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಆಸಿಫ್ (ರಾಜು) ಸೇಠ, ಜಿಲ್ಲಾಧಿಕಾರಿ ಮಹಮದ ರೋಶನ್, ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ತ್ಯಾಗರಾಜನ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.