ಬೆಳಗಾವಿ : ಬೆಳಗಾವಿ ಕೋಟೆ ರಕ್ಷಣೆಗೆ ತೋಡಲಾಗಿದ್ದ ಬೃಹತ್ ಕಂದಕಕ್ಕೆ ಹೊಂದಿಕೊಂಡಂತೆ ಬಸ್ ಮತ್ತು ಟ್ರಕ್ ಟರ್ಮಿನಸ್ ಸ್ಥಾಪಿಸಲು ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಯೋಜನೆ ರೂಪಿಸಿದ್ದು, ಇದರಿಂದ ಐತಿಹಾಸಿಕ ಕೋಟೆಗೆ ಧಕ್ಕೆ ಉಂಟಾಗಲಿದೆ. ಸಾರ್ವಜನಿಕರು ಯೋಜನೆಯ ವಿರುದ್ಧ ಸಿಡಿದೆದಿದ್ದಾರೆ.
ಸುಮಾರು 1,000 ವರ್ಷಗಳ ಹಿಂದಿನ ಐತಿಹಾಸಿಕ ಬೆಳಗಾವಿ ಕೋಟೆ ಮತ್ತೊಮ್ಮೆ ವಿವಾದದ ಮೂಲಕ ಈಗ ಗಮನ ಸೆಳೆದಿದೆ. ಯೋಜನೆಯು ಪ್ರದೇಶದ ಸಂಭಾವ್ಯ ಪರಿಸರ ಮತ್ತು ಪಾರಂಪರಿಕ ಹಾನಿಯ ಬಗ್ಗೆ ಕಳವಳವುಂಟಾಗಿದೆ. ಭಾರತದ ಸಂವಿಧಾನದ 51 ಎ (ಎಫ್) ಮತ್ತು (ಜಿ) ಯಲ್ಲಿ ಪ್ರತಿಪಾದಿಸಲಾದ ತತ್ವವು ದೇಶದ ಪರಂಪರೆ ಮತ್ತು ಪರಿಸರವನ್ನು ರಕ್ಷಿಸುವದಾಗಿದೆ. ಅದರಂತೆ ಕೋಟೆ ನಿವಾಸಿ ಡಾ. ನಿತಿನ್ ಖೋತ ಮತ್ತು ಡಾ. ಸಿದ್ಧಾರ್ಥ್ ಪೂಜಾರಿ ಅವರು ಕಂಟೋನ್ಮೆಂಟ್ ಬೋರ್ಡ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅವರಿಗೆ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.
ಕಂಟೋನ್ಮೆಂಟ್ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸಿಇಒಗೆ ಮನವರಿಕೆ ಮಾಡಿಕೊಟ್ಟರೂ ಕೂಡ ಕಾಮಗಾರಿ ಆರಂಭಿಸಿರುವುದು ನಾಗರಿಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಆಳವಾದ ಕಂದಕದಿಂದ ಸುತ್ತುವರಿದ ಮತ್ತು ಪ್ರಾಚೀನ ದೇವಾಲಯಗಳು, ಜೈನ ಬಸದಿಗಳು ಮತ್ತು ಮಸೀದಿಗಳಿಂದ ಸಮೃದ್ಧವಾಗಿರುವ ಬೆಳಗಾವಿಯ ಕೋಟೆಯು ನಗರದ ಪ್ರಾಚೀನ ಪರಂಪರೆಯ ಸಂಕೇತ. ಮಾತ್ರವಲ್ಲದೆ ಕರ್ನಾಟಕ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಕಾಯಿದೆ 1966 ರ ಅಡಿಯಲ್ಲಿ ಸಂರಕ್ಷಿತ ತಾಣವಾಗಿದೆ. ಈ ಕೋಟೆಯ ಸುತ್ತಲಿನ ಪ್ರದೇಶವನ್ನು ಕೋಟೆಯ ಸಮಗ್ರತೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಶತಮಾನಗಳಿಂದ ಸ್ವಚ್ಛವಾಗಿ ಇರಿಸಲಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಕೆಲವನ್ನು ವಾಣಿಜ್ಯ ಉದ್ದೇಶಕ್ಕೆ ಗುತ್ತಿಗೆ ನೀಡಲಾಗಿದೆ. ಇದು ವಿವಿಧ ಪರಿಸರ ಸವಾಲುಗಳನ್ನು ಸೃಷ್ಟಿಸಿದೆ.
ಈ ಹಿಂದೆ ಈ ಭಾಗದಲ್ಲಿ ಸಗಟು ತರಕಾರಿ ಮಾರುಕಟ್ಟೆ ಹಾಗೂ ಟ್ರಕ್ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರಿಂದ ಭಾರಿ ಟ್ರಾಫಿಕ್ ಜಾಮ್ ಹಾಗೂ ಪರಿಸರ ನಾಶವಾಗುತ್ತಿತ್ತು. ಈ ಸಮಸ್ಯೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ತರಕಾರಿ ಮಾರುಕಟ್ಟೆ ಮತ್ತು ಟ್ರಕ್ ಪಾರ್ಕಿಂಗ್ ಅನ್ನು ಹೆಚ್ಚು ಸೂಕ್ತವಾದ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು. ಅಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಮಾಲಿನ್ಯ ನಿಯಂತ್ರಣ ನಿಯಮಗಳು ಕಟ್ಟುನಿಟ್ಟಾಗಿವೆ. 2017 ರಲ್ಲಿ ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಕೋಟೆಯನ್ನು ಪ್ರಮುಖ ಪಾರಂಪರಿಕ ಪ್ರದೇಶವೆಂದು ಗುರುತಿಸಲಾಯಿತು. ಅದೇ ರೀತಿ ಕೋಟೆಯ ಕಂದಕವನ್ನು ಸ್ವಚ್ಛಗೊಳಿಸಲು, ಅದರ ಗೋಡೆಗಳನ್ನು ಸರಿಪಡಿಸಲು ಮತ್ತು ಕೋಟೆಯ ಸುತ್ತಲೂ ಉದ್ಯಾನವನವನ್ನು ಅಭಿವೃದ್ಧಿಪಡಿಸಲು 30.98 ಕೋಟಿ ರೂ. ಯೋಜನೆ ಇದ್ದರೂ ದುರದೃಷ್ಟವಶಾತ್, ಈ ಯೋಜನೆಯನ್ನು ಸೇನೆಯ ಸ್ಟೇಷನ್ ಕಮಾಂಡರ್ ವಿರೋಧಿಸಿದರು. ಹೆಚ್ಚಿದ ಪ್ರವಾಸೋದ್ಯಮವು ಈ ಪ್ರದೇಶದಲ್ಲಿ ನೆಲೆಸಿರುವ ಭಾರತೀಯ ಸೇನೆಯ ಭದ್ರತೆಗೆ ತೊಂದರೆಯಾಗಬಹುದು ಎಂದು ಇದನ್ನು ವಿರೋಧಿಸಿದರು. ಪರಿಣಾಮವಾಗಿ ಮಂಜೂರಾದ ಹಣವನ್ನು ಕೇಂದ್ರ ಸರ್ಕಾರಕ್ಕೆ ಹಿಂತಿರುಗಿಸಲಾಯಿತು. ಹೀಗಾಗಿ, ಯೋಜನೆ ಸ್ಥಗಿತಗೊಂಡಿತು.