ಕುಡಚಿ: ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ದಿಗಾಗಿ ಪ್ರಸಕ್ತ ಸಮರ್ಥ ಅಭ್ಯರ್ಥಿಗಳ ತಂಡವನ್ನು ಮುನ್ನಲೆಯಾಗಿ ರಚಿಸಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ತಾವು ಈ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರುವದಲ್ಲದೇ ಮತ್ತಷ್ಟು ಅಭಿವೃದ್ದಿ ಕಾರ್ಯಗಳಿಗೆ ಸಹಕರಿಸಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದಿಲ್ಲಿ ಹೇಳಿದರು.
ಕೋಳಿಗುಡ್ಡ ಗ್ರಾಮದಲ್ಲಿ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಸಾರ್ವಜನಿಕರನ್ನುದ್ದೆಶಿಸಿ ಬಿಜೆಪಿ ಪ್ರಚಾರ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರಗಳಿಂದ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ. ಈ ಕಾರಣದಿಂದ ತಾವು ಈ ಬಾರಿ ನಮ್ಮ ಅಭ್ಯರ್ಥಿಗಳಿಗೆ ಮತ ಕೊಡವೇಕು. ನಮ್ಮ ಡಬಲ್ ಇಂಜಿನ್ ಸರ್ಕಾರ ಕಾರ್ಯ ನಿರ್ವಹಿಸಲಿದೆ ಎಂದ ಅವರು ಈ ಬಾರಿ ಕರ್ನಾಟಕದಲ್ಲಿ ಕಮಲ ಅರಳಿಸುವಂತೆ ಮನವಿ ಮಾಡಿದರು.
ಈ ಹಿಂದೆ ಕಾಂಗ್ರೆಸ್ ನಡೆಸಿದ ಭ್ರಷ್ಟಾಚಾರದಿಂದ ದೇಶದ ಜನರಿಗೆ ಸಂಕಷ್ಟ ಎದುರಾಗಿತ್ತು. ಆದರೆ ಕಳೆದ ಒಂಬತ್ತು ವರ್ಷದಿಂದ ದೇಶದಲ್ಲಿ ಸುಭದ್ರ ಹಾಗೂ ಸ್ಥಿರ ಸರ್ಕಾರ ಅಸ್ತಿತ್ವದಲ್ಲಿದ್ದು ಜನರ ಆರ್ಥಿಕ ಹಾಗೂ ಸಾಮಾಜಿಕ ಬದಲಾವಣೆಯಾಗಿದೆ. ನಿರಂತರ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು. ವಿರೋಧ ಪಕ್ಷದ ಕಾಯಕವೇ ಮೋದಿಯನ್ನು ಟೀಕೆ ಮಾಡುವುದು ಅಲ್ಲದೇ ನನ್ನನ್ನೆ ಜಪ ಮಾಡುತ್ತಾರೆ ಅದೇ ಅವರ ಕೆಲಸ. ನಮ್ಮ ಸರ್ಕಾರದ ಆಡಳಿತಾವಧಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇವೆ. ಬಡ ಹಾಗೂ ಹಿಂದುಳಿದ ವರ್ಗದ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಅಭಿವೃದ್ದಿ ನಿರಂತರವಾಗಿರಲಿದೆ. ಆದ್ದರಿಂದ ಈ ಬಾರಿ ಬಿಜೆಪಿಗೆ ಸ್ಪಷ್ಟಬಹುಮತ ನೀಡಿ ಎಂದರು.
ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರನ್ನು ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ, ಕಬ್ಬು ಬೆಳಗಾರರಿಗೆ ಅನೇಕ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದು ರೈತರ ಬಾಳು ಬೆಳಕಾಗಿಸಲಾಗಿದೆ ಎಂದರು. ಕಬ್ಬಿಗೆ ವೈಜ್ಞಾನಿಕ ಬೆಲೆ ನೀಡುವ ದೃಷ್ಟಿಯಿಂದ ಹತ್ತು ಲಕ್ಷ ಕೋಟಿ ಹಣ ಬಿಡುಗಡೆ ಮಾಡಲಾಗಿದೆ ಎಂದ ಅವರು ಸಕ್ಕರೆ ಜಿಲ್ಲೆಗೆ ನಮನ ಸಲ್ಲಿಸುದಾಗಿ ತಿಳಿಸಿದರು.
ಕುಡಚಿ ಸೇರಿಂತೆ ಬೆಳಗಾವಿ ಜಿಲ್ಲೆಯ ಎಲ್ಲಾ ಕ್ಷೇತ್ರದ ಗೆಲುವಿಗೆ ಜನಾಶಿರ್ವಾದ ಮಾಡಬೇಕು. ಕಳೆದ ತಿಂಗಳು ಸಕ್ಕರೆ ನಾಡಿನ ಜನ ರೋಡ್ ಶೋ ನಲ್ಲಿ ಅಭೂತಪೂರ್ವ ಬೆಂಬಲ ನೀಡಿದ್ದನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಈ ಬಾರಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಕಾಂಗ್ರೆಸ್ನಿಂದ ಅಂಬೇಡ್ಕರ್ ಅವರಿಗೆ ಅವಮಾನ : ಈ ಹಿಂದೆ ಕಾಂಗ್ರೆಸ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದನು ಯಾರು ಮರೆಯುವುದಿಲ್ಲ. ದೇಶದ್ರೋಹಿ, ಕಟುಕ ಎಂಬಿತ್ಯಾದಿ ಕೆಟ್ಟ ಶಬ್ದ ಬಳಸಿತ್ತು. ಜೊತೆಗೆ ದಲಿತರ ಅಭಿವೃದ್ಧಿಯನ್ನು ಕಾಂಗ್ರೆಸ್ ಕಡೆಗಣನೆ ಮಾಡಿತ್ತು, ಆದರೆ ಬಿಜೆಪಿ ದಲಿತರು ಹಾಗೂ ಹಿಂದುಳಿದ ವರ್ಗದ ಜನರ ಅಭಿವೃದ್ಧಿ ಮಾಡಿದೆ ಎಂದು ಹೇಳಿದರು.
ಸಾವಯವ ಬೆಲ್ಲದ ಮೂರ್ತಿ: ಕಬ್ಬು ಬೆಳೆಯುವ ಪ್ರದೇಶದ ಸಾವಯವ ಬೆಲ್ಲದಲ್ಲಿ ತಯಾರಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರತಿರೂಪದ ಮೂರ್ತಿ ನೀಡಿ ಅವರನ್ನು ಗೌರವಿಸಲಾಯಿತು. ಕುಡಚಿ ಶಾಸಕ ಪಿ. ರಾಜೀವ್ ಹಾಗೂ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಬೆಲ್ಲದ ಮೂರ್ತಿ ನೀಡಿ ಗೌರವಿಸಿದರು. ಸಂಸದ ಈರಣ್ಣ ಕಡಾಡಿ ಹಾರ ಹಾಕಿದರೆ, ಸಂಸದ ಅಣ್ಣಾಸಾಹೇಬ್ ಜೊಲ್ಲೆ ಪೇಟ ತೊಡಿಸಿದರು.
ಈ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಈರಣ್ಣ ಕಡಾಡಿ. ಶಾಸಕರಾದ ಶ್ರೀಮಂತ ಪಾಟೀಲ್, ದುರ್ಯೋಧನ ಐಹೊಳೆ, ಮುಖಂಡರಾದ ರಮೇಶ್ ದೇಶಪಾಂಡೆ, ರಾಜೇಶ್ ನೇರ್ಲಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.