ಬೆಳಗಾವಿ : ಜಿಲ್ಲಾಧಿಕಾರಿ ಕಚೇರಿಯಲ್ಲಿ ಯುವಕ ಫಿನಾಯಿಲ್ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಅಂಶಗಳು ಲಭಿಸಿವೆ.
ಗೋಕಾಕ ಮೂಲದ ಕುಮಾರ ಕೊಪ್ಪದ (23) ಬುಧವಾರ ಮಧ್ಯಾಹ್ನ ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಏಕಾಏಕಿ ಫಿನಾಯಿಲ್ ಸೇವಿಸಿದ್ದಾನೆ. ತಕ್ಷಣ ಪೊಲೀಸರು ಅವನನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿ ಅಗತ್ಯ ಚಿಕಿತ್ಸೆ ನೀಡಿದ್ದಾರೆ. ನಂತರ ಪೊಲೀಸರು ಆತನ ಹಿನ್ನೆಲೆ ಕೆದಕಿದಾಗ ಮಹತ್ವದ ಅಂಶಗಳು ಗೊತ್ತಾಗಿವೆ. ಜಿಲ್ಲಾಧಿಕಾರಿ ಕಚೇರಿಗೆ ಕೆಟ್ಟ ಹೆಸರು ತರಲು ವಿಷ ಸೇವನೆ ಪ್ರಯತ್ನ ಮಾಡಿದ್ದ. ಕುಮಾರ ಕೊಪ್ಪದ ಗೋಕಾಕ ಹಳ್ಳಿಯೊಂದರಲ್ಲಿ ಎರಡು ದಿನಗಳ ಹಿಂದೆ ಯಾವುದೋ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದ. ಆಗ ಅಲ್ಲಿನ ಜನ ಈತನ ವಿರುದ್ಧ ಪೋಲಿಸ್ ಸಹಾಯವಾಣಿ 112 ಕ್ಕೆ ಕರೆ ಮಾಡಿ ದೂರು ದಾಖಲು ಮಾಡಿದ್ದಾರೆ.
ಆಗ ಕುಮಾರನಿಗೆ ಏನು ಮಾಡಬೇಕು ಎಂದು ತೋಚದೆ ಅಲ್ಲಿಂದ ಪರಾರಿಯಾಗಿದ್ದಾನೆ. ನೇರವಾಗಿ ಬೆಳಗಾವಿಗೆ ಬಂದು ಸಂಬಂಧಿಕರ ಮನೆಯಲ್ಲಿ ರಕ್ಷಣೆ ಕೋರಿದ್ದಾನೆ. ಎರಡು ದಿನಗಳ ಕಾಲ ಇದ್ದ ಅವನಿಗೆ ಸಂಬಂಧಿಕರು 200 ರೂಪಾಯಿ ನೀಡಿ ಹೋಗು ಎಂದು ಹೇಳಿ ಕಳಿಸಿದ್ದಾರೆ. ನಂತರ ಕುಮಾರ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದಾನೆ. ಗೋಕಾಕಗೆ ಹೋದರೆ ತನ್ನ ವಿರುದ್ಧ ಕೇಸು ದಾಖಲು ಆಗಬಹುದು ಎಂದು ಭಯಗೊಂಡಿದ್ದಾನೆ. ಬೆಳಗಾವಿಯಲ್ಲಿ ಸಾಕಷ್ಟು ಸಂಚಾರ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದ ವೇಳೆ ಒತ್ತಡದಲ್ಲಿದ್ದ. ಫಿನಾಯಿಲ್ ಬಾಟಲಿಯೊಂದಿಗೆ ಆಗಮಿಸಿ ಅದನ್ನು ಸೇವಿಸಿದ್ದಾನೆ.
ಈ ಹಿಂದೆಯೇ ಆತ ಅಪರಾಧ ಪ್ರಕರಣ ನಡೆಸಿದ್ದ. ಯುವತಿಯ ಪ್ರಕರಣ ಒಂದರಲ್ಲಿ ಸಿಕ್ಕಿಬಿದ್ದಿದ್ದ. ಯುವತಿಯ ಸಹೋದರ ಪೊಲೀಸ್.
ಹಾಗಾಗಿ ಮೊನ್ನೆ ನಡೆದ ಹಾಗೂ ಈ ಹಿಂದಿನ ಯುವತಿಯ ಪ್ರಕರಣದಲ್ಲಿ ಭಾಗಿಯಾದ ತನಗೆ ಪೊಲೀಸರು ಶಿಕ್ಷೆ ನೀಡಬಹುದು ಎಂಬ ಭಯದಿಂದ ಮುಂದೇನು ಮಾಡಬೇಕು ಎಂದು ತೋಚದೆ ಫಿನಾಯಿಲ್ ಸೇವಿಸುವ ನಿರ್ಧಾರಕ್ಕೆ ಬಂದಿದ್ದಾನೆ. ಈತ ರೈತ ಮತ್ತು ಕಾರ್ಮಿಕನಲ್ಲ. ಯಾವುದೇ ಸಮಸ್ಯೆ ಇಟ್ಟುಕೊಂಡು ಜಿಲ್ಲಾಧಿಕಾರಿ ಕಚೇರಿಗೆ ಬಂದಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಇವನಿಗೆ ಸಂಬಂಧಪಟ್ಟ ಯಾವುದೇ ಫೈಲ್ ಇಲ್ಲ ಎಂಬ ಅಂಶ ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ. ಒಟ್ಟಾರೆ ಜಿಲ್ಲಾಧಿಕಾರಿ ಕಚೇರಿಗೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಯುವಕ ತೀವ್ರ ಒತ್ತಡದಲ್ಲಿ ಈ ಕೃತ್ಯ ನಡೆಸಿರುವುದು ಬಯಲಾಗಿದೆ.