ಬೆಳಗಾವಿ : ಗ್ರಾಮ ಪಂಚಾಯಿತಿ ಗುತ್ತಿಗೆದಾರ ಕುಟುಂಬ ಸಮೇತರಾಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಹೇಳಿದ ಪರಿಣಾಮ ಜಿ.ಪಂ. ಮುಂದೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ಅಶೋಕ ಚೌಗಲಾ ಎನ್ನುವ ಗುತ್ತಿಗೆದಾರ ಬಿಲ್ ಕೊಡದೇ ತೊಂದರೆ ನೀಡುತ್ತಿದ್ದ ಅಧಿಕಾರಿಗಳಿಂದ ಬೇಸತ್ತು ಈ ಕ್ರಮಕ್ಕೆ ಮುಂದಾಗಿದ್ದರು. ಕರಗುಪ್ಪಿ ಗ್ರಾಮದಲ್ಲಿ ಎನ್ಆರ್ ಇಜಿ ಅಡಿಯಲ್ಲಿ ಹಲವು ಕಾಮಗಾರಿ ನಡೆಸಲಾಗಿದೆ. ಐದು ವರ್ಷಗಳಾದರೂ ಗ್ರಾಮ ಪಂಚಾಯಿತಿ ಪಿಡಿಒ ಜಯಪ್ರಕಾಶ, ಪಂಚಾಯಿತಿ ಅಧ್ಯಕ್ಷ ಗುರುಸಿದ್ದಪ್ಪ ಪಾಯನ್ನವರ ಮತ್ತು ತಾಂತ್ರಿಕ ಸಹಾಯಕ ವಿಠ್ಠಲ ಬೋರನ್ನವರ ಸೇರಿಕೊಂಡು ಕಮಿಷನ್ ಪಡೆದು ಈಗ ಇನ್ನಷ್ಟು ಹಣ ನೀಡುವ ಬೇಡಿಕೆ ಇಟ್ಟು ಈಗಾಗಲೇ ನಡೆಸಿದ ಕೆಲಸಕ್ಕೆ ಹಣ ಮಂಜೂರು ಮಾಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು. ನಾನು ಸಾಕಷ್ಟು ಹಣ ಕಳೆದುಕೊಂಡಿರುವುದರಿಂದ ನಮ್ಮ ಕುಟುಂಬ ತೀವ್ರ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತರಾಗಿ ವಿಷ ಸೇವಿಸುವುದು ನಮಗೆ ಉಳಿದಿರುವ ದಾರಿ ಎಂದು ಅವರು ಹೇಳಿದರು.
ನಾನು ಮಾಡಿರುವ ಕೆಲಸದ ಬಾಕಿ ಹಣ ಮಂಜೂರು ಮಾಡಬೇಕು. ತಕ್ಷಣ ಪಿಡಿಒ ಅವರನ್ನು ಅಮಾನತು ಮಾಡಬೇಕು. ಇಲ್ಲವಾದಲ್ಲಿ ನಾನು ಇಲ್ಲಿಂದ ಕದಲುವುದಿಲ್ಲ ಎಂದು ಅವರು ಪಟ್ಟು ಹಿಡಿದರು. ನಂತರ ಪೊಲೀಸರು ಅವರನ್ನು ವಶಕ್ಕೆ ಪಡೆದರು.
ಜಿ. ಪಂ. ಎದುರು ವಿಷ ಸೇವಿಸಲು ಮುಂದಾದ ಗುತ್ತಿಗೆದಾರ
