ಬೆಳಗಾವಿ: ದೇಶದ 100 ಸ್ಮಾರ್ಟ್‌ಸಿಟಿಗಳ ಪೈಕಿ 18 ನಗರಗಳನ್ನು ಸ್ಮಾರ್ಟ್ ಸಿಟಿ-2ರ ಯೋಜನೆಗೆ ಆಯ್ಕೆ ಪ್ರಕ್ರಿಯೆ ನಡೆದಿದೆ. ಎರಡನೇ ಹಂತದಲ್ಲಿಯೂ ಬೆಳಗಾವಿ ಸ್ಥಾನ ಪಡೆದುಕೊಳ್ಳಲು ಹಲವು ರೀತಿಯಲ್ಲಿ ಯೋಜನೆಗಳನ್ನು ರೂಪಿಸುವದರಲ್ಲಿ ನಿರತವಾಗಿದೆ. ಯೋಜನಾಬದ್ದ ಸೂಕ್ತ ಪ್ರಸ್ತಾವನೆ ಸಲ್ಲಿಸಿದರೆ 2024 ಜನೇವರಿ 20ರಂದು ಆಯ್ಕೆ ಪಟ್ಟಿಯಲ್ಲಿ ಬೆಳಗಾವಿಯ ಹೆಸರು ಇರಲಿದೆ.
ದೇಶದ 18 ನಗರಗಳನ್ನು ಸ್ಮಾರ್ಟ್‌ಸಿಟಿ-2 ಯೋಜನೆಗೆ ಆಯ್ಕೆ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಇತ್ತೀಚೆಗೆ ದೆಹಲಿಯಲ್ಲಿ ಸ್ಮಾರ್ಟ್ ಸಿಟಿಯ ಅಧಿಕಾರಿಗಳ ಕಾರ್ಯಾಗಾರ ನಡೆಯಿತು. ದೇಶದ 18 ನಗರಗಳನ್ನು ಆಯ್ಕೆ ಮಾಡಲು ಎಲ್ಲ 100 ಸ್ಮಾರ್ಟ್ ಸಿಟಿ ಯೋಜನೆಗಳಿಂದ ಕೇಂದ್ರ ಸರ್ಕಾರ ಪ್ರಸ್ತಾವನೆ ಪಡೆದುಕೊಂಡಿದೆ. ಸ್ಮಾರ್ಟ ಸಿಟಿ-2ರಲ್ಲಿ ಆಯ್ಕೆಯಾದ ನಗರಕ್ಕೆ ತಲಾ 135 ಕೋಟಿ ರೂ.ಗಳ ಅನುದಾನ ಸಿಗಲಿದೆ. ಇದರಲ್ಲಿ ಶೇ. 80ರಷ್ಟನ್ನು ಘನ ತ್ಯಾಜ್ಯ ನಿರ್ವಹಣೆಗೆ ಬಳಸಿಕೊಳ್ಳಬೇಕೆಂಬ ನಿಯಮವಿದೆ. ಉಳಿದ ಶೇ. 20ರಷ್ಟು ಅನುದಾನವನ್ನು ಇತರೆ ಕಾರ್ಯಕ್ಕೆ ಬಳಸಿಕೊಳ್ಳಬಹುದಾಗಿದೆ. ಶೇ. 40ರಷ್ಟು ಕೇಂದ್ರ
ಸರ್ಕಾರ, ಶೇ. 40ರಷ್ಟು ರಾಜ್ಯ ಸರ್ಕಾರ ಹಾಗೂ ಶೇ. 20ರಷ್ಟು ಮಹಾನಗರ ಪಾಲಿಕೆ ಅನುದಾನ ನೀಡಬೇಕಾಗಿದೆ.
2024 ಜನೇವರಿ 15ರೊಳಗೆ ಮತ್ತೊಮ್ಮೆ ಪ್ರಸ್ತಾವನೆ ಪಡೆದುಕೊಂಡು ಸೂಕ್ತ ಎನಿಸುವ ಯೋಜನಾಬದ್ದ ಪ್ರಸ್ತಾವನೆಯನ್ನು ಆಯ್ಕೆ ಮಾಡಿ ಜನೇವರಿ 20ಕ್ಕೆ ಆಯ್ಕೆ ಮಾಡಲಿದೆ. ಕೇಂದ್ರ ಸರ್ಕಾರದ ಸ್ಮಾರ್ಟ್‌ಸಿಟಿ ಯೋಜನೆಗಾಗಿ ದೇಶದ 100 ನಗರಗಳನ್ನು ಆಯ್ಕೆ ಮಾಡಿದ್ದು, ಮೊದಲ ಹಂತದಲ್ಲಿಯೇ 2016ರಲ್ಲಿ ಬೆಳಗಾವಿ ನಗರ ಆಯ್ಕೆ ಆಗಿತ್ತು. ಬೆಳಗಾವಿಗಾಗಿ ಒಂದು ಸಾವಿರ ಕೋಟಿ ರೂ, ಅನುದಾನವೂ ಬಿಡುಗಡೆ ಆಗಿತ್ತು. 2016 ಜೂನ್ 25ರಂದು ಸ್ಮಾರ್ಟ್‌ಸಿಟಿ ಯೋಜನೆಗೆ ಚಾಲನೆಯೂ ಸಿಕ್ಕಿತ್ತು. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಎಂದರೆ 2021 ಜೂನ್‌ವರೆಗೆ ಎಲ್ಲ ಕಾಮಗಾರಿಗಳು ಮುಕ್ತಾಯಗೊಂಡು ಸ್ಮಾರ್ಟ್‌ಸಿಟಿ ಆಗಬೇಕಿತ್ತು.
ಎರಡು ವರ್ಷ ಕೊರೊನಾ ವೇಳೆ ಕಾಮಗಾರಿ ಸ್ಥಗಿತಗೊಂಡು ಇನ್ನೂ ಹಲವು ಕಾಮಗಾರಿಗಳು ಬಾಕಿ ಉಳಿದಿವೆ. ಇದಕ್ಕಾಗಿ ಎಲ್ಲ ಕೆಲಸ ಪೂರ್ಣಗೊಳಿಸಲು 2024 ಜೂನ್‌ವರೆಗೆ ಹೊಸ ಡೆಡ್‌ಲೈನ್ ನೀಡಲಾಗಿದೆ. ಇವು ಪೂರ್ತಿ ಆಗುವುದಕ್ಕಿಂತ ಮುಂಚೆಯೇ ಸ್ಮಾರ್ಟ್ ಸಿಟಿ-2 ಯೋಜನೆ ಆರಂಭವಾಗುತ್ತಿದೆ.
ಬೆಳಗಾವಿಯ ಪ್ರಸ್ತಾವನೆ ಏನು? : ಸ್ಮಾರ್ಟ್‌ಸಿಟಿ-2 ರ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕಾದರೆ ಘನ ತ್ಯಾಜ್ಯ ನಿರ್ವಹಣೆಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕಿದೆ.
ನಗರದಲ್ಲಿ ನಿತ್ಯ 250 ಟನ್‌ಗೂ ಹೆಚ್ಚು ತ್ಯಾಜ್ಯ ಕಸ ಸಂಗ್ರಹವಾಗುತ್ತಿದೆ. ಇದನ್ನು ಬಳಸಿಕೊಂಡು ವಿದ್ಯುತ್ ಅಥವಾ ಗ್ಯಾಸ್ ತಯಾರಿಸಬಹುದಾಗಿದೆ. ಒಂದು ವೇಳೆ 18 ನಗರಗಳಲ್ಲಿ ಬೆಳಗಾವಿ ನಗರವೂ ಆಯ್ಕೆಯಾದರೆ ಘನ ತ್ಯಾಜ್ಯ ನಿರ್ವಹಣೆ ಆಗಿ, ಕಸದ ಸಮಸ್ಯೆ ನೀಗಲಿದೆ.
ಸ್ಮಾರ್ಟ್‌ಸಿಟಿ-2 ಯೋಜನೆಗೆ ದೇಶದ 100 ನಗರಗಳ ಪೈಕಿ 18 ನಗರಗಳನ್ನು ಆಯ್ಕೆ ಮಾಡಲು ಕೇಂದ್ರ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ. ಈ ನಿಟ್ಟಿನಲ್ಲಿ ಬೆಳಗಾವಿಯೂ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ವಿನೂತನ ಕಾರ್ಯ ನಡೆಸುವ ಪ್ರಸ್ತಾವನೆ ಕಳುಹಿಸಲಿದೆ. ಈ ಬಗ್ಗೆ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಂಡು 2024ರ ಜನೇವರಿ 15ರೊಳಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮಹಾನಗರ ಪಾಲಿಕೆ ಎಇಇ ಹನುಮಂತ ಕಲಾದಗಿ ಅವರು ತಿಳಿಸಿದ್ದಾರೆ.