ಬೆಳಗಾವಿ:ಕರ್ನಾಟಕದ ಆಚೆ ಮಹಾರಾಷ್ಟ್ರ ಗಡಿಯಲ್ಲಿರುವ ಶಿನ್ನೋಳಿಯಲ್ಲಿ ಮಹಾ ಮೇಳಾವ್‌ ಮಾಡಲಾಗುವುದು. ಅಲ್ಲಿ ಅನುಮತಿ ಸಿಕ್ಕಿದೆ. ಮಹಾರಾಷ್ಟ್ರದ ಹಲವು ನಾಯಕರೂ ಪಾಲ್ಗೊಳ್ಳಲಿ
ದ್ದಾರೆ’ ಎಂದು ಎಂಇಎಸ್‌ ಮುಖಂಡರು ಮಾಹಿತಿ ನೀಡಿದ್ದಾರೆ.

ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ಆಯೋಜಿಸಿದ್ದ ಮಹಾಮೇಳಾವ್‌ಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಸಮಾವೇಶ ನಡೆಸಲುದ್ದೇಶಿದ್ದ ಕಡೆ ನಿಷೇಧಾಜ್ಞೆ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಗಡಿಯಾಚೆಯ, ಮಹಾರಾಷ್ಟ್ರದ ಶಿನ್ನೋಳಿಯಲ್ಲಿ ಸಮಾವೇಶ ಮಾಡಲು ಎಂಇಎಸ್‌ ಮುಖಂಡರು ನಿರ್ಧರಿಸಿದ್ದಾರೆ.
ಪ್ರತಿಬಾರಿಯಂತೆ, ಅಧಿವೇಶನ ಸಂದರ್ಭದಲ್ಲಿ ಮಹಾಮೇಳಾವ್‌ ನಡೆಸಲು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗಿತ್ತು. ಜಿಲ್ಲಾಡಳಿತ ಅನುಮತಿ ನಿರಾಕರಿಸಿದ್ದರೂ ಸಮಾವೇಶ ಮಾಡಿಯೇ ಸಿದ್ಧ ಎಂದು ಎಂಇಎಸ್‌ ಮುಖಂಡರು ಹಟ ಹಿಡಿದರು.
ಡಿ.4ರಂದು ನಗರದ ವ್ಯಾಕ್ಸಿನ್‌ ಡಿಪೊದಲ್ಲಿ ಸಮಾವೇಶಕ್ಕೆ ಸಿದ್ಧತೆ ನಡೆದಿತ್ತು. ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿದ ಬಳಿಕನಗರದ ಬೇರೆಡೆ ಸಮಾವೇಶಕ್ಕೆ ಎಂಇಎಸ್‌ ಸಿದ್ಧತೆ ನಡೆಸಿತ್ತು. ಸುಳಿವು ಪಡೆದ ಜಿಲ್ಲಾಡಳಿತ ನಗರದೆಲ್ಲೆಡೆ ನಿಷೇಧ ಜಾರಿ ಮಾಡಿದೆ.
‘ಶಾಂತಿ– ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮಹಾಮೇಳಾವ್‌ಗೆ ಅವಕಾಶ ನೀಡುವುದಿಲ್ಲ’ ಎಂದು ನಗರ ಪೊಲೀಸ್‌ ಆಯುಕ್ತ ಎಸ್‌.ಎನ್‌.ಸಿದ್ರಾಮಪ್ಪ ತಿಳಿಸಿದ್ದಾರೆ.
ಮಾತಿನ ಚಕಮಕಿ: ವ್ಯಾಕ್ಸಿನ್‌ ಡಿಪೊ ಮೈದಾನದಲ್ಲಿ ಭಾನು ವಾರ ಬೆಳಿಗ್ಗೆ ಮಹಾ ಮೇಳಾವ್‌ಗೆ ಸಿದ್ಧತೆಗೆ ಎಸಿಪಿ ನಾರಾಯಣ ಭರಮನಿ, ಅಧಿಕಾರಿಗಳು ತಡೆಯೊಡ್ಡಿದರು. ಆಗ ಎಂಇಎಸ್‌ ಮುಖಂಡರಾದ ಮನೋಹರ ಕಿಣೇಕರ್, ರಾಜಾಬಾವು ಪಾಟೀಲ ಇತರರು ಪೊಲೀಸರ ಜೊತೆ ವಾಗ್ವಾದ ನಡೆಸಿದರು. ನಿಷೇಧಾಜ್ಞೆ ಮಾಹಿತಿ ನೀಡಿದ ಬಳಿಕ ನಿರ್ಗಮಿಸಿದರು.